ಉಮೇಶ ಜಾಧವ್ ಕ್ಷೇತ್ರವನ್ನು ಕಡೆಗಣಿಸಿದ್ದಾರೆ: ಶಾಸಕ ಅಲ್ಲಮಪ್ರಭು ಪಾಟೀಲ್ ಟೀಕೆ
ಕಲಬುರಗಿ,ಏ.29-ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದ ಪೆÇ್ರಡಕ್ಟ್. ನಮ್ಮ ಪಕ್ಷದಿಂದ ಬಿಜೆಪಿಗೆ ಹೋದವರು. ಆದರೆ, ಸಂಸದನಾಗಿ ಆಯ್ಕೆಯಾದ ಮೇಲೆ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಈಗ ಮತ್ತೆ ಚುನಾವಣೆ ಬಂದಿದೆ. ಅವರು ಮತ ಕೇಳಲು ಬರುತ್ತಾರೆ. ಏನೂ ಅಭಿವೃದ್ದಿ ಮಾಡದ ಜಾಧವ್ ಅವರನ್ನ ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಹೀರಾಪುರ ಬಡಾವಣೆಯಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಮಾತನಾಡಿದರು.
ಎಲ್ಲರೂ ಒಂದೇ ಎನ್ನುವ ಮನೋಭಾವನೆ ಹೊಂದಿರುವ ನೀವೆಲ್ಲ ಬಿಜೆಪಿಯವರ ಯಾವುದೇ ಆಮಿಷಗಳಿಗೆ ಒಳಗಾಗದೇ ಸರ್ವರಿಗೂ ಸಮಾನತೆ ಸಾರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿಗಳು ರಾಜ್ಯದ ಎಲ್ಲ ಜನರಿಗೆ ತಲುಪಿವೆ. ನೀವೆಲ್ಲ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಶಕ್ತಿ ಯೋಜನೆ ಸಮರ್ಪಕ ಜಾರಿಯಿಂದಾಗಿ ಮಹಿಳೆಯರು ಧರ್ಮಸ್ಥಳ ಸೇರಿದಂತೆ ರಾಜ್ಯದ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಇದರಿಂದ ದೇವಸ್ಥಾನದ ಹುಂಡಿಗಳು ಭರ್ತಿ ಯಾಗಿವೆ. ಇದನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳೇ ಹೇಳಿದ್ದಾರೆ ಎಂದರು.
ನಮ್ಮ ಗ್ಯಾರಂಟಿಗಳ ಬಗ್ಗೆ ಅಸಮಾಧಾನ ಹೊಂದಿರುವ ಬಿಜೆಪಿಯ ನಾಯಕರು ಈ ಎಲ್ಲ ಯೋಜನೆಗಳ ತಡೆಗೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಮಕ್ಕಳ ಗುಣಮಟ್ಟದ ಶಿಕ್ಷಣ ಕೊಡಿಸಲು, ಪೌಷ್ಠಿಕಾಂಶ ಆಹಾರ ಖರೀದಿ ಮಾಡಲು ಬಳಕೆಯಾಗುವ ಗ್ಯಾರಂಟಿ ಯೋಜನೆಯ ಹಣ ನಿಮಗೆಲ್ಲ ತಲುಪಿಸುವ ನಮ್ಮ ಬದ್ದತೆಗೆ ಅವರು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ ಖರ್ಗೆ, ಸ್ವತಃ ಬಿಜೆಪಿಗರೇ ಜಾಧವ್ ವಿರುದ್ಧ ಗೋ ಬ್ಯಾಕ್ ಅಭಿಯಾನ ಮಾಡಿರುವಾಗ ನೀವು ಯಾಕೆ ಅವರನ್ನು ಬೆಂಬಲಿಸಬೇಕು ? ಎಂದು ಪ್ರಶ್ನಿಸಿದರು.
ಸಿಎಂ ಫಯಾಜ್ ಮಾತನಾಡಿ ಈ ಸಲ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಆಗುವುದು ನಿಶ್ಚಿತ. ಹಾಗಾಗಿ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮತನೀಡಿ ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಸಜ್ಜಾದ್ ವಾಹೀಬ್ ಬಾಬಾ, ಇರ್ಫಾನ್ ಪಟೇಲ್, ಖಯ್ಯೂಂ ಪಟೇಲ್, ಬಾಬು ಒಂಟಿ, ಡಾ ಕಿರಣ್ ದೇಶಮುಖ, ನೀಲಕಂಠ ಮೂಲಗೆ, ಪ್ರವೀಣ್ ಹರವಾಳ ಸೇರಿದಂತೆ ಹಲವರಿದ್ದರು.