ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ: ಶಾಸಕ ಯಶವಂತರಾಯಗೌಡ
ವಿಜಯಪುರ,ಏ.29:ಆಗಿರುವ ಮತ್ತು ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿರಿಸಿ ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಇಂಡಿ ತಾಲೂಕಿನ ತಡವಲಗಾದಲ್ಲಿ ನಡೆದ ಜಿಪಂ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.
ಆಲಗೂರ ಅವರು ಮಾದರಿಯ ಸಂಸದರಾಗುವ ಎಲ್ಲ ಲಕ್ಷಣಗಳಿವೆ. ಅವರು ವಿದ್ಯಾವಂತರಾಗಿದ್ದು, ನಿಮ್ಮ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಲಿದ್ದಾರೆ. ಅನೇಕ ಸಂಸದರು ಕಾಂಗ್ರೆಸ್‍ನಿಂದ ಕೆಲಸ ಮಾಡಿ ಹೋಗಿದ್ದಾರೆ. ಗುಡದಿನ್ನಿ, ದುಬೆಯಂತಹವರನ್ನು ಈಗಲೂ ನಾವೆಲ್ಲ ನೆನಪಿಸುತ್ತಿದ್ದೇವೆ. ದಶಕಗಳಿಂದ ಕಾಂಗ್ರೆಸ್ ಗೆದ್ದಿಲ್ಲ. ಈ ಬಾರಿ ಬದಲಾವಣೆ ನಿಶ್ಚಿತ ಎಂದರು.
ಗುಜರಾತ್ ಮಾಡೆಲ್ ಹೆಸರು ಹೇಳಿ ಬಂದವರು ದೇಶವನ್ನು ಮಾರಲು ನಿಂತಿದ್ದಾರೆ. ಕ್ಯಾಪಿಟಲಿಸ್ಟ್‍ಗಳ ಕೈಗೆ ದೇಶವನ್ನು ನೀಡಿದ್ದು, ಮೋದಿ ಹಾಗೂ ಅಮಿತ್ ಶಾ ದೇಶ ಮಾರುತ್ತಿದ್ದರೆ ಇನ್ನಿಬ್ಬರಾದ ಅಂಬಾನಿ, ಆದಾನಿಗಳು ತೆಗೆದುಕೊಳ್ಳುತ್ತಿದ್ದಾರೆ. ಭಾವನೆಗಳನ್ನು ಕೆರಳಿಸಿ ಮತ ಕೇಳುವುದಷ್ಟೇ ಮೋದಿಯವರ ಕೆಲಸವಾಗಿದೆ. ಇವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಈ ದೇಶವನ್ನು ಕಟ್ಟಿದೆ. ಸಂವಿಧಾನ ಉಳಿಸಲು ಅದು ಯಾವತ್ತೂ ಶ್ರಮಿಸುತ್ತಿದೆ. ಬಡವ, ನಿರ್ಗತಿಕರ ಬದುಕನ್ನು ನಾವು ಕಟ್ಟಿದ್ದೇವೆ. ಮೋದಿಯವರು ಆಯತಪ್ಪಿ ಮಾತನಾಡುತ್ತಿದ್ದಾರೆ. ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹೇಳದೇ ಏನೇನೊ ಮಾತನಾಡುತ್ತಿದ್ದಾರೆ ಎಂದರು.
ಶಾಸ್ತ್ರೀ, ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರಂತಹ ಧೀಮಂತರು ದೇಶವನ್ನು ಮುನ್ನೆಲೆಗೆ ತಂದಿದ್ದಾರೆ. ಕಾಂಗ್ರೆಸ್ ಒಂದೇ ಭರವಸೆ ಎಂದು ಹೇಳಿದರು.
ಅಭ್ಯರ್ಥಿ .ರಾಜು ಆಲಗೂರ ಮಾತನಾಡಿ, ನಮ್ಮ ರಾಜ್ಯ ಕೇಂದ್ರ ಸರಕಾರಕ್ಕೆ ಅತಿ ಹೆಚ್ಚು ತೆರಿಗೆ ನೀಡುತ್ತಿದ್ದರೂ ಅದರ ಪಾಲನ್ನು ನಮಗೆ ಕೊಟ್ಟಿಲ್ಲ. ಸಮಯಕ್ಕೆ ಸರಿಯಾಗಿ ಬರ ಪರಿಹಾರವೂ ನೀಡಲಿಲ್ಲ. ಅದರ ಬದಲಾಗಿ ಉದ್ಯಮಿಗಳ ಲಕ್ಷ ಲಕ್ಷ ಕೋಟಿ ರೂ. ಸಾಲವನ್ನು ಮೋದಿಯವರು ಮನ್ನಾ ಮಾಡಿದರು ಎಂದು ಟೀಕಿಸಿದರು.
ರಾಜ್ಯ ಸರಕಾರ ನುಡಿದಂತೆ ನಡೆದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಹೆಣ್ಣುಮಕ್ಕಳು, ಯುವಕರಿಗೆ ಶಕ್ತಿ ತುಂಬಲಾಗಿದೆ. ಈ ಭಾಗದಲ್ಲೂ ನಿರಂತರ ನೀರು, ಲಿಂಬೆ ಅಭಿವೃದ್ಧಿ ಮಂಡಳಿ, ಕೆರೆ ತುಂಬುವುದು ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳು ಇಂಡಿ ಮತಕ್ಷೇತ್ರದಲ್ಲಾಗಿವೆ. ಆದರೆ ಮೂರು ಸಲ ಸಂಸದರಾದವರಿಂದ ಯಾವುದೇ ಕೆಲಸವಾಗಲಿಲ್ಲ. ರೈಲು, ಪ್ರವಾಸೋದ್ಯಮ ಪ್ರಗತಿ ಮಾಡಲಿಲ್ಲ. ಒಂದೇ ಭಾರತ ರೈಲನ್ನು ವಿಜಯಪುರಕ್ಕೆ ಓಡಿಸಲಿಲ್ಲ. ರಾಜ್ಯದ ಪರ ಮಾತನಾಡಲಿಲ್ಲ. ಈ ಸಲ ಬದಲಾವಣೆ ತಂದು ತಮ್ಮನ್ನು ಆರಿಸಿದರೆ ಲೋಕಸಭೆ ಕ್ಷೇತ್ರದ ಸಂಪೂರ್ಣ ಚಿತ್ರಣ ಬದಲು ಮಾಡುತ್ತೇನೆ. ತಮ್ಮ ವಿಶ್ವಾಸಕ್ಕೆ ಧಕ್ಕೆಯಾಗದಂತೆ ದುಡಿಯುವೆ. ಇಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಿಸಿ ನೀರು ಕೊಡುವುದು ಸೇರಿದಂತೆ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ತಮ್ಮಣ್ಣ ಪೂಜಾರಿ, ಬಾಬು ಸಾಹುಕಾರ ಮೇತ್ರಿ, ಎಂ.ಆರ್. ಪಾಟೀಲ ಮಾತನಾಡಿದರು.
ಚಂದ್ರಶೇಖರ ರೂಗಿ, ಸೋಮು ಬ್ಯಾಳಿ, ಇಲಿಯಾಸ ಬೋರಾಮಣಿ, ಜಾವೇದ್ ಮೊಮಿನ್, ಅಪ್ಪಣ್ಣ ಕಲ್ಲೂರ, ಸಿ.ಎಲ್.ಬರಡೋಲ, ಆನಂದಪ್ಪ ಹುಣಸಗಿ, ಶ್ರೀಮಂತ ಲೋಣಿ, ಸೋಮಶೇಖರ ಬೆಳ್ಳಿ, ಧರ್ಮು ವಾಲೀಕಾರ, ಇಸ್ಮಾಯಿಲ್ ಕಲಬುರಗಿ, ಮೆಹಬೂಬ ಅರಬ್, ಪ್ರಶಾಂತ ಆಲಗೂರ, ಇಮ್ರಾನ್ ಮಕಾನದಾರ ಇತರರು ಇದ್ದರು.