ನಂಜನಗೂಡು ರಾಯರಮಠದಲ್ಲಿ ಧಾರ್ಮಿಕ ಶಿಬಿರ ಸಂಪನ್ನ
ವಿಜಯಪುರ,ಏ.29 :ನಗರದ ಬಾಗಲಕೋಟೆ ರಸ್ತೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಂತ್ರಾ ಲಯ ಮಠಾಧೀಶ ಶ್ರೀ ಸುಬುಧೇಂದ್ರತೀರ್ಥ ಸ್ವಾಮಿಗಳ ಆದೇಶದ ಮೇರೆಗೆ ಹಮ್ಮಿಕೊಂಡ ಒಂದು ವಾರ ಕಾಲ ಧಾರ್ಮಿಕ ಶಿಬಿರ ಶನಿವಾರ ಸಂಜೆ ಸಂಪನ್ನಗೊಂಡಿತು.
ಅಧ್ಯಕ್ಷತೆ ವಹಿಸಿದ್ದ ಮಂತ್ರಾಲಯ ಪಂಡಿತ ಶ್ರೀ ವೇಣುಗೋಪಾಲಾಚಾರ್ಯರು ಮಾತನಾಡಿ, ಮಂತ್ರಾಲಯ ಮಠದ ಪ್ರತಿ ಶಾಖೆಯಲ್ಲೂ ಪ್ರತಿ ವರ್ಷ ಧಾರ್ಮಿಕ ಶಿಬಿರ ನಡೆಸಲಾಗುತ್ತಿದೆ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಪುರುಷರು ಮತ್ತು ಮಹಿ ಳೆಯರೂ ಭಾಗವಹಿಸುವ ಈ ಶಿಬಿರದಲ್ಲಿ ಮಂತ್ರ, ಧರ್ಮ, ಸಂಸ್ಕøತಿ, ಜ್ಯೋತಿಷ್ಯಶಾಸ್ತ್ರ ಮುಂತಾದವುಗಳ ಕುರಿತು ಶಾಸ್ತ್ರ ಬದ್ಧವಾಗಿ ಕಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪಂಡಿತ ಡಾ. ಕೃಷ್ಟಾಚಾರ್ಯ ಕಾಖಂಡಕಿ ಮಾತನಾಡಿ, ಇಂದಿನ ದಿನಗಳಲ್ಲಿ ನಮ್ಮ ಸಂಸ್ಕøತಿ ಉಳಿಸಿ ಬೆಳೆಸಲು ಇಂತಹ ಧಾರ್ಮಿಕ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಮಂತ್ರಾಲಯದಿಂದ ಆಗಮಿಸಿದ್ದ ಶ್ರೀ ಆನಂದಾಚಾರ್ಯ ದಿವಾಣಜಿ ಆಶಯ ನುಡಿಗಳನ್ನು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.
ಏಳು ದಿನಗಳ ಕಾಲ ನಡೆಸಿಕೊಟ್ಟ ಈ ಧಾರ್ಮಿಕ ಶಿಬಿರದಲ್ಲಿ ಸುಮಾರು 20 ಕ್ಕೂ ಮಿಕ್ಕಿ ಚಿಕ್ಕ ಮಕ್ಕಳು ಅತ್ಯಂತ ಶಿಸ್ತು ಬದ್ಧವಾಗಿ ಆಸಕ್ತಿಯಿಂದ ಆಲಿಸಿದರಲ್ಲದೇ ಕಲಿತ ವಿಷಯಗಳನ್ನು ತಮ್ಮ ಭಾವಿ ಜೀವನದಲ್ಲಿ ಮುಂದುವರೆಸುವ ಪಣ ತೊಟ್ಟರು. ಪ್ರತಿದಿನ ಬೆಳಿಗ್ಗೆ 8-30 ಕ್ಕೆ ಪ್ರಾರಂಭವಾಗುತ್ತಿದ್ದ ಶಿಬಿರ ಸಾಯಂಕಾಲ 5 ಗಂಟೆಗೆ ಮುಕ್ತಾಯಗೊಳ್ಳುತ್ತಿತ್ತು. ಭಾಗವಹಿಸುವ ಪ್ರತಿಯೊಬ್ಬರಿಗೂ ಉಪಹಾರ, ಭೋಜನ ಮತ್ತು ಹಾಲಿನ ವ್ಯವಸ್ಥೆ ಮಾಡಲಾಗಿತ್ತು.
ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಶೇಷ ವಸ್ತ್ರ, ಮಂತ್ರಾಲಯದಿಂದ ಶ್ರೀಗಳು ಕಳಿಸಿಕೊಟ್ಟಿದ್ದ ಫಲ ಮಂತ್ರಾಕ್ಷತೆ ವಿತರಿಸಲಾಯಿತು.
ಪ್ರಾರಂಭದಲ್ಲಿ ಅರ್ಚಕ ಶ್ರೀಧರಾಚಾರ್ಯ ವೇದಘೋಷ ಮಾಡಿದರು. ಕುಮಾರಿ ಪ್ರೀತಿ ಕೃಷ್ಣಾಷ್ಟಕ ಪ್ರಾರ್ಥನೆಗೈದರು. ಶ್ರೀಮಠದ ಅರ್ಚಕ ವ್ಯವಸ್ಥಾಪಕ ರವಿ ಆಚಾರ್ಯ ಸ್ವಾಗತಿಸಿ, ವಂದಿಸಿದರು.
ಹಿರಿಯ ಭಕ್ತ ವಾಮನರಾವ ದೇಶಪಾಂಡೆ, ಶ್ರೀಮಠದ ಕಾರ್ಯಕರ್ತರಾದ ದಾಮೋದರಾಚಾರ್ಯ, ಸಂದೀಪ ಉಪಸ್ಥಿತರಿದ್ದರು.