ಹತ್ತು ವರ್ಷಗಳಲ್ಲಿ ಬಿಜೆಪಿ ಸಾಧನೆ ಶೂನ್ಯ: ಎಂ.ಬಿ.ಪಾಟೀಲ
ಬೀದರ್:ಏ.29: ಕಾಂಗ್ರೇಸ್ ಪಕ್ಷ 70 ವರ್ಷಗಳಲ್ಲಿ ದೇಶಕ್ಕಾಗಿ ಏನು ಮಾಡಿದೆ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುತ್ತಾರೆ. ಇಡೀ ಭಾರತ ದೇಶಕ್ಕೆ ಸ್ವತಂತ್ರ ತಂದು ಕೊಡುವುದರ ಜೊತೆಗೆ ದೇಶ ಕಟ್ಟಿದ್ದೇ ಕಾಂಗ್ರೇಸ್ ಪಕ್ಷ ಎಂದು ಬೃಹತ್ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಸ್ಥಾಪನೆಯಾದ ಶಾಲಾ ಕಾಲೇಜುಗಳು, ಮೆಡಿಕಲ್ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಏಮ್ಸ್ ಕಾಲೇಜುಗಳು ಕಾಂಗ್ರೇಸ್ ಅವಧಿಯಲ್ಲಿ ಸ್ಥಾಪನೆಯಾಗಿವೆ. ಆದರೆ 2014ರಲ್ಲಿ ದೇಶಕ್ಕೆ ಅಚ್ಛೆ ದಿನ್ ಬರುತ್ತವೆ ಎಂದು ಹೇಳಿದ ಮೋದಿಯವರು ರಾಷ್ಟ್ರದ ಜನತೆಗೆ ನೀಡಿದ್ದು ವಿವಿಧ ಸಾಮಗ್ರಿಗಳ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಪೆಟ್ರೋಲ್ ಡಿಜೆಲ್ ಬೆಲೆ ಏರಿಕೆಯ ಬಿಸಿ ಎಂದರಲ್ಲದೆ ವರ್ಷಕ್ಕೆ 2 ಕೋಟಿ ಉದ್ಯೋಗ ಅಂದ್ರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಬದಲಾಗಿ ಉದ್ಯೋಗಸ್ಥರೂ ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಎಂದು ಜರಿದರು.
ರೈತರ ಆದಾಯ ದ್ವಿಗುಣ ಆಗಲಿಲ್ಲ. “ನ ಖಾವುಂಗಾ ನ ಖಾನೆದೂಂಗಾ” ಎಂದು ಹೇಳಿದ ಮೋದಿಯವರು ಎಲೆಕ್ಟ್ರಾಲ್ ಬಾಂಡ್‍ನ 7,600 ಕೋಟಿ ರೂಪಾಯಿ ಹಗರಣ ನಡೆಸಿದ್ದಾರೆ. ಇದನ್ನು ಸುಪ್ರಿಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ನ್ಯಾ. ಚಂದ್ರಚೂಡ ಅವರು ಬಹಿರಂಗ ಪಡಿಸಿದ್ದಾರೆ ಎಂದು ಆರೋಪಿಸಿದರು. ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ಅವರನ್ನು ಬಿಜೆಪಿ ಎಂಬ ವಾಷಿಂಗ್ ಮಸೀಶನ್ ನಲ್ಲಿ ಸೇರಿಸಿಕೊಂಡು ಅವರನ್ನು ಸ್ವಚ್ಛ ಎಂದು ಕ್ಲೀನ್ ಚಿಟ್ ಸರ್ಟಿಫಿಕೇಟ್ ನೀಡಿದ್ರು. ಅಬಕಾರಿ ಹಗರಣ ಎಂದು ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ತಳ್ಳಿದರು. ರಾಜ್ಯದಲ್ಲಿ ಬಡವರಿಗೆ ಅಕ್ಕಿ ನೀಡಲಿಲ್ಲ. ಹೀಗೆ ಧರ್ಮದ ಹೆಸರಿನಲ್ಲಿ ಮೋದಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದರಲ್ಲದೆ ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೇಸ್ ಪಕ್ಷ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೇಸ್ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಮುಖರಾದ ಬಸವರಾಜ ಬುಳ್ಳಾ, ಬಸವರಾಜ ಧನ್ನೂರ, ಬಸವರಾಜ ಭತಮುರ್ಗೆ, ಸೋಮನಾಥ ಕಂದಗೂಳೆ, ಜಾರ್ಜ್ ಫನಾರ್ಂಡಿಸ್ ಸೇರಿದಂತೆ ಇತರರು ಹಾಜರಿದ್ದರು.