ರೈತರ ಮೇಲೆ ಅನುಕಂಪವಿಲ್ಲದ ರಾಜ್ಯ ಸರ್ಕಾರ; ಕುಮಾರಸ್ವಾಮಿ ಟೀಕೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.29: ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಬರಗಾಲ ಆವರಿಸಿದರೂ, ರೈತರ ಮೇಲೆ ಅನುಕಂಪ ಇಲ್ಲದ ಕಾಂಗ್ರೆಸ್ ಸರ್ಕಾರ, ಕಟುಕ ಸರ್ಕಾರವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಹೊಸಪೇಟೆ ನಗರದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಬಂದಾಗಿನಿಂದ ಅಭಿವೃದ್ಧಿಗೆ ಪೂರಕವಾದ ಕೆಲಸಗಳೇ ಇಲ್ಲ. ಬದಲಿಗೆ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ನಾನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕೇಳಲು ಬಯಸುತ್ತೇನೆ. ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಭೀಕರ ಬರಗಾಲ ಆವರಿಸಿದೆ. ಜಾನುವಾರುಗಳಿಗೆ ಮೇವಿಲ್ಲ. ಜನರಿಗೆ ಕುಡಿಯಲು ನೀರಿಲ್ಲ. ರೈತರಿಗೆ ಬೆಳೆ ನಷ್ಟ ಪರಿಹಾರವನ್ನೂ ವಿತರಿಸಿಲ್ಲ. ಆದರೂ, ರೈತರ ಮೇಲೆ ಅನುಕಂಪ ತೋರದ ಕಟುಕ ಸರ್ಕಾರವಾಗಿದೆ ಎಂದು ದೂರಿದರು. 
ಕೇಂದ್ರದಲ್ಲಿ ಹಿಂದೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವಧಿಯಲ್ಲಿ ಕೇವಲ 1500 ಕೋಟಿ ರೂ. ಪ್ರವಾಹ ಪರಿಹಾರ ಬಂದಿತ್ತು. ಆದರೆ, ಕಳೆದ 10 ವರ್ಷಗಳ ಪ್ರಧಾನಿ ಮೋದಿ ಸರ್ಕಾರದಲ್ಲಿ ಅದಕ್ಕೂ ಜಾಸ್ತಿ ಬರ ಪರಿಹಾರ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಆಗಿರುವ ಬೆಳೆನಷ್ಟಕ್ಕೆ ಎನ್‍ಡಿಆರ್‍ಎಫ್ ಪ್ರಕಾರ ಕೇಂದ್ರದಿಂದ 3454 ಕೋಟಿ ರೂ. ಬಿಡುಗಡೆಯಾಗಿದ್ದರೂ, ರಾಜ್ಯ  ಸರ್ಕಾರ, 4663 ಕೋಟಿ ಬರಪರಿಹಾರ ಬರಬೇಕಿತ್ತು ಎಂದು ಬೆಂಗಳೂರಿನ ವಿಧಾನಸೌಧ ಬಳಿ ಪ್ರತಿಭಟನೆಗೆ ಕುಳಿತಿದ್ದಾರೆ. ಇದು ಕಾಂಗ್ರೆಸ್‍ನವರ ಸಣ್ಣತನದ ರಾಜಕಾರಣ ತೋರುತ್ತದೆ ಎಂದವರು ಆಪಾದಿಸಿದರು.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಕಳೆದ ಏ.26 ರಂದು ನಡೆದಿದ್ದು, 14 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ನಡೆಯುವ 14 ಕ್ಷೇತ್ರಗಳಲ್ಲೂ ಪ್ರಧಾನಿ ಮೋದಿ ವರ್ಚಸ್ಸು ಗೆಲ್ಲುವ ವಾತಾವರಣ ಸೃಷ್ಟಿಸಿದೆ ಎಂದು ತಿಳಿಸಿದರು.