ಸಾಂಸ್ಕೃತಿಕ ಶಕ್ತಿ ಸರಿಯಾಗಿದ್ದರೆ ಸಮಾಜ ಸದೃಢ ಸಾಧ್ಯ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೯: ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದರೆ ಸಾಲದು, ನಡೆ, ನುಡಿ, ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ಪ್ರಾವೀಣ್ಯತೆ ಹೊಂದಿರಬೇಕು ಎಂದು ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.ನಗರದ ಎ ವಿ ಕಮಲಮ್ಮ ಕಾಲೇಜಿನಲ್ಲಿ  ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ನಮನ ಆಕಾಡೆಮಿ ಹಮ್ಮಿಕೊಂಡಿದ್ದ ಭರತನಾಟ್ಯಂನ ನಟುವಾಂಗಂ ಮತ್ತು ದಶವಿಧ ಆಡುವುಗಳು ಕುರಿತ ಉಪನ್ಯಾಸ ಹಾಗೂ ನೃತ್ಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಶಕ್ತಿ ಸರಿಯಾಗಿದ್ದರೆ ಸಮಾಜ ಸದೃಢ ವಾಗಿರುತ್ತದೆ. ಸಾಂಸ್ಕೃತಿಕವಾಗಿ ಸದೃಢವಾಗಿರುವ ಸಮಾಜದಲ್ಲಿ ವಾಸಿಸುವ ಜನರ ನಡೆ, ನುಡಿ ಕೂಡ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆ ನಗರ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಇಲ್ಲಿ ಯಾವುದೇ ಸಾಹಿತ್ಯ, ನೃತ್ಯ ಕಾರ್ಯಕ್ರಮ ಆಯೋಜಿಸಿದರೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಹೋದಾರೆ ಸಾಲದು, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರವನ್ನು ಕೂಡ ಪ್ರವೇಶಿಸಬೇಕು. ವಿದ್ಯಾರ್ಥಿಗಳು ಕ್ಲಾಸ್ ರೂಮಿನಲ್ಲಿ ಹೇಗಿರುತ್ತಾರೆ ಎಂಬುದಕ್ಕಿಂತ, ಅವರು ಕಾಲೇಜಿನ ಕಾರಿಡಾರ್ ಹಾಗೂ ಕ್ಯಾಂಪಸ್ ಒಳಗೆ ಹೇಗಿರುತ್ತಾರೆ ಎಂಬುದು ಬಹು ಮುಖ್ಯ ಎಂದು ಹೇಳಿದರು.ಜೆಸಿಐ ಅಂತಾರಾಷ್ಟ್ರೀಯ ತರಬೇತುದಾರರು, ಕಾರ್ಯಕಾರಿ ನಿರ್ದೇಶಕರಾದ ಲತಿಕಾ ಶೆಟ್ಟಿ, ಕಾಲೇಜು ಪ್ರಿನ್ಸಿಪಾಲ್ ಕಮಲಾ ಸೊಪ್ಪಿನ, ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ್, ನಮನ ಆಕಾಡೆಮಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಡಿ.ಕೆ. ಮಾಧವಿ, ಪ್ರೊ. ಆರ್. ಆರ್. ಶಿವಕುಮಾರ್, ಡಾ.ಕವಿತಾ ಉಪಸ್ಥಿತರಿದ್ದರು.