ದಮನಿತರ ಏಳ್ಗೆಗೆ ಶ್ರಮಿಸಿದ ನಾಯಕ ಬಾಬೂಜಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.29: ಜಾತಿ, ಧರ್ಮಗಳ ಭೇದಭಾವಗಳನ್ನು ವಿರೋಧಿಸುತ್ತಲೇ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ದಮನಿತ ಸಮುದಾಯದ ಏಳ್ಗೆಗೆ ಶ್ರಮಿಸಿದ ಬಾಬು ಜಗಜೀವನರಾಮ್ ಅವರ ಕೊಡುಗೆ ಸದಾಕಾಲ ಸ್ಮರಣೀಯವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ, ರಾಜಕೀಯ ತಜ್ಞ  ಪ್ರೊ.ಮಲ್ಲಿಕಾರ್ಜುನ ಆರ್.ಹಲಸಂಗಿ ಅಭಿಪ್ರಯಾಯಪಟ್ಟರು.ದಾವಣಗೆರೆ ವಿಶ್ವವಿದ್ಯಾನಿಲಯದ ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಮತಾ ದಿನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.ದೇಶದಲ್ಲಿ ಜಾತಿ ನಿರ್ಮೂಲನೆ, ಸಾಮಾಜಿಕ- ಆರ್ಥಿಕ ತಾರತಮ್ಯ ನಿವಾರಣೆ ಸಾಧ್ಯವಿಲ್ಲ. ಆದ್ದರಿಂದ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದರು.ಬಾಬೂಜಿ ಅವರು ತಮ್ಮ ಸಾಮ್ಯವಾದಿ ತತ್ವ, ಹೋರಾಟ ಮನೋಭಾವ, ಸಹನೆ, ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಾಮಾಜಿಕ ಪರಿವರ್ತನೆ  ಯಶಸ್ಸಿನ ಕನಸನ್ನು ಸಾಕಾರಗೊಳಿಸಲು ಯತ್ನಿಸಿದವರು ಎಂದು‌ ತಿಳಿಸಿದರು.ಬಾಬೂಜಿ ಅವರು ಸತ್ಯವಾದಿ, ತತ್ವವಾದಿ ಮತ್ತು ಪ್ರಜಾಸತ್ತಾತ್ಮಕವಾದಿ ಆಗಿದ್ದರು. ಸ್ವಾತಂತ್ರ್ಯಾ ನಂತರದಲ್ಲಿ ದೇಶವನ್ನು ರಾಜಕೀಯವೂ ಸೇರಿದಂತೆ ಕೃಷಿ, ಕೈಗಾರಿಕೆ ಆರ್ಥಿಕ ಅಭಿವೃದ್ಧಿಯನ್ನು ಸಾಂಸ್ಕೃತಿಕವಾಗಿ, ಕಟ್ಟುವ ಕೆಲಸದಲ್ಲಿ ಬಾಬೂಜಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.ಐದು ದಶಕಗಳ ಕಾಲ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಬಾಬೂಜಿ ದೇಶದಲ್ಲಿ ಹಸಿರು ಕ್ರಾಂತಿಯ ಸಾಕಾರ ಮೂರ್ತಿಯಾಗಿ ಆಹಾರದ ಸಂಕಷ್ಟವನ್ನು ನಿವಾರಿಸಿದರು. ಅಪ್ಪಟ ಪ್ರಜಾಸತ್ತಾತ್ಮಕವಾದಿ ಸಂಸದೀಯ ಪಟುವಾಗಿದ್ದ ಬಾಬೂಜಿ,ಮಹಾ ಸ್ವಾಭಿಮಾನಿ. ರಾಜಕೀಯ ಪಕ್ಷದ ನಿರ್ಧಾರಗಳನ್ನು ಖಂಡಿಸಿ ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ಛಲವಾದಿ. ಕೃಷಿ, ಕೈಗಾರಿಕೆ, ರೈಲ್ವೆ, ರಕ್ಷಣಾ ಸಚಿವರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ತಳಸಮುದಾಯದ ಪ್ರಮುಖ ನಾಯಕ ಎಂದು ನುಡಿದರುಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಆಧ್ಯಾತ್ಮಿಕ ತತ್ವ, ಚಿಂತನೆಗಳ ಮೂಲಕ ರಾಜಕೀಯವಾಗಿ, ಆರ್ಥಿಕವಾಗಿ,  ದೇಶದಲ್ಲಿ ಪರಿರ್ತನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಪ್ರಾಮಾಣಿಕ ರಾಜಕಾರಣಿ ಮುತ್ಸದ್ಧಿ ನಾಯಕ ಎಂದರು.