ಮತದಾನ ಹಬ್ಬ ಆಚರಣೆ
ನವಲಗುಂದ,ಏ29: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1 ರಲ್ಲಿರುವ ಮತಗಟ್ಟೆಯಲ್ಲಿ ಧ್ವಜಾರೋಹಣವನ್ನು ಸಹಾಯಕ ಚುನಾವಣಾಧಿಕಾರಿ ದೇವರಾಜ್ ಆರ್ ನೆರವೇರಿಸುವ ಮೂಲಕ ಮತದಾನ ಹಬ್ಬವನ್ನು ಆಚರಿಸಿದರು.
ಈ ವೇಳೆ ಮಾತನಾಡಿ ಅವರು ರಾಷ್ಟ್ರೀಯ ಹಬ್ಬಗಳ ರೀತಿಯಲ್ಲಿ ಮತದಾನದ ಹಬ್ಬವನ್ನು ಆಚರಿಸಲಾಗುತ್ತಿದೆ.ಇದೆ ಮೊದಲ ಬಾರಿ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಯಲ್ಲೂ ಏಕಕಾಲಕ್ಕೆ ಧ್ವಜಾರೋಹಣ ನೆರವೇರಿಸಿ ಸ್ಥಳೀಯ ಮುಖಂಡರು ಮತ್ತು ಮತದಾರರಿಗೂ ಆಹ್ವಾನ ನೀಡಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಗಿದೆ ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ ನಮ್ಮ ನಡೆ ಮತಗಟ್ಟೆಯ ಕಡೆಗೆ ಘೋಷವಾಕ್ಯದೊಂದಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದು ಮತದಾನಕ್ಕೆ ತೊಂದರೆಯುಂಟು ಮಾಡಬಹುದೆಂಬ ಆತಂಕವಿದ್ದರೂ, ಜನತೆಯಲ್ಲಿ ಚುನಾವಣೆಯ ಉತ್ಸಾಹ ಕುಂದಿಲ್ಲ ಎನ್ನುವುದನ್ನು ಕಂಡುಕೊಂಡಿದ್ದೇವೆ.
ಮತಗಟ್ಟೆಗಳಲ್ಲಿ ನೆರಳು ಒದಗಿಸಲು ಸಾಧ್ಯವಾದಷ್ಟು ಕಡೆ ಕ್ರಮವಹಿಸಲಾಗುವುದು. ದೇಶ ಕಟ್ಟುವ ಕಾರ್ಯದಲ್ಲಿ ಬಹು ಮಹತ್ತರ ಪಾತ್ರವಾಗಿರುವ ನಾಗರಿಕರು ಕಡ್ಡಾಯವಾಗಿ ಮತ ಚಲಾಯಿಸಬೇಕು. ನಿಮಗಿಷ್ಟವಾದ ಅಭ್ಯರ್ಥಿಯ ಆಯ್ಕೆ ನಿಮ್ಮದಾಗಲಿ. ಯಾವುದೇ ಆಮಿಷಕ್ಕೆ ಒಳಗಾಗದಿರಿ ಎಂದು ಮತದಾರರಲ್ಲಿ ಕೋರಿದರು.
ಅಣ್ಣಿಗೇರಿ ತಹಸೀಲ್ದಾರ್ ರಾಜು ಮಾವರಕರ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾಗನೂರ, ಶಾಲೆ ಪ್ರದಾನಗುರುಗಳಾದ ಶಿವಾನಂದ ಬೆಂಚಿಕೇರಿ, ಆರ್ ಎನ್ ಹಾಲಿಗೇರಿ, ರವಿ ವಿಶ್ವಜ್ಞ, ಎನ್ ಎನ್ ಹಾಲಿಗೇರಿ, ಭಾರತಿ ಹಳೆಮನಿ ಸೇರಿದಂತೆ ಪುರಸಭೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಶಾಲಾ ಶಿಕ್ಷಕರು, ಸ್ಥಳೀಯ ನಾಗರೀಕರು, ಅಂಗನವಾಡಿ ಹಾಗೂ ಬಿ ಎಲ್ ಓಗಳು ಉಪಸ್ಥಿತರಿದ್ದರು.