ಮಹಿಳೆ ಅತ್ಯಾಚಾರ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ
ಕಲಬುರಗಿ.ಸೆ 21: ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಸಾಕ್ಷಿ ನಾಶ ಮಾಡಿದ ಆರೋಪ ಸಾಬೀತಾದ್ದರಿಂದ ಇಬ್ಬರಿಗೆ 5ನೆಯ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕ್ರಮವಾಗಿ ಜೀವಾವಧಿ ಶಿಕ್ಷೆ, 50 ಸಾವಿರ ರೂ ದಂಡ ಮತ್ತು 7 ವರ್ಷ ಜೈಲುಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ 2018 ರ ಜುಲೈ 26 ರಂದು ನಡೆದ ಕೃತ್ಯದಲ್ಲಿ ಭಾಗಿಯಾದ ಮಲ್ಲಪ್ಪ ಈಶ್ವರಪ್ಪ ತಳವಾರ ಮತ್ತು ಗಜೇಂದ್ರ ಶಿವಶರಣಪ್ಪ ಶಿಕ್ಷೆಗೊಳಗಾದವರು.
ಪ್ರಕರಣ ಕುರಿತು ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಾದ,ವಿವಾದ ಪರಿಶೀಲಿಸಿದ 5ನೆಯ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಕರೋಶಿ ಅವರು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹಯಾಳಪ್ಪ ಎನ್ ಬಳಬಟ್ಟಿ ಅವರು ವಾದ ಮಂಡಿಸಿದ್ದರು.