ಜಿಲ್ಲಾ ಸಹಕಾರ ಯೂನಿಯನ್ ವಾರ್ಷಿಕ ಮಹಾಸಭೆ ಯಶಸ್ವಿ
ಬೀದರ,ಸೆ 21: ಬೀದರ ಜಿಲ್ಲಾ ಸಹಕಾರ ಯೂನಿಯನ್‍ನ 62ನೇ ವಾರ್ಷಿಕ ಮಹಾಸಭೆಯನ್ನು ಯೂನಿಯನ್ನಿನ ಅಧ್ಯಕ್ಷ ಪರಮೇಶ್ವರ ಮುಗಟೆ ಅಧ್ಯಕ್ಷತೆಯಲ್ಲಿ ಯೂನಿಯನ್ನಿನ ಸಭಾಭವನದಲ್ಲಿ ನಡೆಸಲಾಯಿತು. ಬೀದರ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರುಗಳೆಲ್ಲರೂ ಮಹಾಸಭೆಯಲ್ಲಿ ಪಾಲ್ಗೊಂಡರು. ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷ ಪರಮೇಶ್ವರ ಮುಗಟೆ ವಾರ್ಷಿಕ ವರದಿ ಓದಿದರು. ಮುಂದುವರೆದು ಬೀದರ ಜಿಲ್ಲಾ ಸಹಕಾರ ಯೂನಿಯನ್ ನಿರ್ವಹಿಸುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ವಲಯವಾರು ಸಂಘಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದೆ. ಹೆಚ್ಚು ಹೆಚ್ಚು ಸಹಕಾರ ವಾರ ಪತ್ರಿಕೆಯ ಚಂದಾದಾರರನ್ನು ಮಾಡಿಕೊಳ್ಳಬೇಕು ಇದರಿಂದ ಸಹಕಾರ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯನ್ನು ತಿಳಿಯಬಹುದಾಗಿದೆÉ. ಜಿಲ್ಲೆಯಲ್ಲಿ ಮಾತೃಸಂಸ್ಥೆಯಾಗಿ ಜಿಲ್ಲಾ ಸಹಕಾರ ಯೂನಿಯನ್ ಶಿಕ್ಷಣ, ತರಬೇತಿ ಮತ್ತು ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಮಾಹಿತಿ ಕೇಂದ್ರವಾಗಿ ಕೆಲಸ ಮಾಡಲು ಪ್ರಯತ್ನಿಸಬೇಕಾಗಿದೆ. ಜಿಲ್ಲಾ ಸಹಕಾರ ಯೂನಿಯನ್ನಿನ ಸದಸ್ಯತ್ವ ಪಡೆಯದೇ ಇರುವ ಸಂಘಗಳು ಸದಸ್ಯತ್ವ ಪಡೆಯಿರಿ ಎಂದು ತಿಳಿಸಿದರು
ಬೀದರ ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಹಾಗೂ ಬೀದರ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಸಹಕಾರ ಸಂಘಗಳು ಸಹಕಾರ ಶಿಕ್ಷಣ ನಿಧಿ ನೀಡುವುದು ನೇರವಾಗಿ ಮಹಾಮಂಡಳಕ್ಕೆ ತಲುಪುತ್ತದೆ. ಕರ್ನಾಟಕ ರಾಜ್ಯದಲ್ಲಿ ಮಹಾಮಂಡಳವು ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಸಹಕಾರ ಸಂಘಗಳಿಂದ ಬರುವ ಸಹಕಾರ ಶಿಕ್ಷಣ ನಿಧಿಯಿಂದ ಅಧ್ಯಕ್ಷರಿಗೆ, ನಿರ್ದೇಶಕರಿಗೆ, ಕಾರ್ಯದರ್ಶಿಗಳಿಗೆ ಹಲವಾರು ವಿಷಯಗಳು ಕುರಿತು ತರಬೇತಿ ಕಾರ್ಯಕ್ರಮಗಳನ್ನು ಯೂನಿಯನ್ನಿನ ಮುಖಾಂತರ ಜರುಗಿಸಲು ಮಾರ್ಗದರ್ಶನ ನೀಡುತ್ತದೆ. ಇದರಿಂದ ಸಹಕಾರ ಚಳುವಳಿಯ ಪ್ರಗತಿಯನ್ನು ಹೊಂದಲು ಸಾಧ್ಯವಾಗುತ್ತಿದೆ. ಹಾಗೆಯೇ ಮಹಾಮಂಡಳದ 8 ತರಬೇತಿ ಕೇಂದ್ರಗಳನ್ನು ಸಹ ಹೊಂದಿದೆಇದರಿಂದ ವರ್ಷಕ್ಕೆ 2 ಬಾರಿ 6 ತಿಂಗಳ ತರಬೇತಿ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕ ಮ. ಸಲಿಮೋದ್ದೀನ್ ಮಾತನಾಡಿದರು.ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್. ಆರ್. ಮಲ್ಲಮ್ಮ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು.