ಪಿಎಸ್‍ಐ ಮೇಲೆ ಹಲ್ಲೆ ಮಾಡಿ ಪರಾರಿ ಯತ್ನ ಗುಂಡು ಹಾರಿಸಿ ಕೊಲೆ ಆರೋಪಿ ಬಂಧನ
ಕಲಬುರಗಿ.ಸೆ 21: ಅಳಂದ ತಾಲೂಕಿನ ಪಡಸಾವಳಿ ಗ್ರಾಪಂ ಮಾಜಿ ಸದಸ್ಯ,ರೌಡಿಶೀಟರ್ ವಿಶ್ವನಾಥ ಜಮಾದಾರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮಣ ಪೂಜಾರಿ ಹಿತ್ತಲ ಶಿರೂರ ಎಂಬಾತನನ್ನು ಇಂದು ಬೆಳಿಗ್ಗೆ ಅಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಬಳಿ ಗುಂಡು ಹಾರಿಸಿ ಬಂಧಿಸಲಾಗಿದೆ.
ನಿಂಬರಗಾ ಪಿಎಸ್‍ಐ ಇಂದುಮತಿ ಅವರಿಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಮೇಲೆ ಗುಂಡು ಹಾರಿಸಿ ಆತನ್ನು ಬಂಧಿಸಲಾಗಿದೆ.
ಕಳೆದ 16 ರಂದು ನಡೆದ ವಿಶ್ವನಾಥ ಜಮಾದಾರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮಣ ಪೂಜಾರಿ ಮಾಡ್ಯಾಳ ಬಳಿ ಕುಲಾಲಿ ರಸ್ತೆಯಲ್ಲಿನ ಮಲ್ಲಯ್ಯ ಮುತ್ಯಾನ ಗುಂಪಾದಲ್ಲಿ ಅಡಗಿ ಕುಳಿತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಆಳಂದ ಸಿಪಿಐ ಪ್ರಕಾಶ ಯಾತನೂರ, ಅಫಜಲಪೂರ ಪಿಎಸ್‍ಐ ಸೋಮಲಿಂಗ ಒಡೆಯರ್ ,ನಿಂಬರಗಾ ಪಿಎಸ್‍ಐ ಇಂದುಮತಿ ಮತ್ತು ಸಿಬ್ಬಂದಿಗಳಾದ ಸಿದ್ದರಾಮ,ಮಲ್ಲಿಕಾರ್ಜುನ,ಲಕ್ಷ್ಮೀಪುತ್ರ,ಕಲ್ಯಾಣಿ,ಮಹಿಬೂಬ್ ಶೇಖ್ ಹಾಗೂ ಇತರರು ತೆರಳಿದ್ದರು.
ಈ ವೇಳೆ ಆರೋಪಿ ಲಕ್ಷ್ಮಣ ಪೂಜಾರಿ ,ನಿಂಬರಗಾ ಪಿಎಸ್‍ಐ ಇಂದುಮತಿ ಅವರ ಬಲಗೈಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಅಫಜಲಪುರ ಪಿಎಸ್‍ಐ ಸೋಮಲಿಂಗ ಒಡೆಯರ್ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ.ಆತನ ಬಲಗಾಲಿಗೆ ಗಾಯವಾಗಿದೆ.ಗಾಯಗೊಂಡ ಪಿಎಸ್‍ಐ ಇಂದುಮತಿ ಅವರನ್ನು ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆಗೆ ಮತ್ತು ಆರೋಪಿಯನ್ನು ಜಿಮ್ಸ್ ಗೆ ದಾಖಲಿಸಲಾಗಿದೆ.
ನಿಂಬರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.