ಬಾಲ್ಯದ ಬೇಸಿಗೆ ಬಂಡಿ ಶಿಬಿರದ ಸಮಾರೋಪ: ನಿರ್ಮಲಾ ಮಠಪತಿ
ಸಂಜೆವಾಣಿ ನ್ಯೂಸ್
ಮೈಸೂರು: ಏ.29:- ಕೂಡು ಕುಟುಂಬಗಳ ಮರೆಯಾಗುವಿಕೆ ಹಾಗೂ ನಗರೀಕರಣದಿಂದ ಮಕ್ಕಳು ಸಹಜ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಸಹಜ ಬಾಲ್ಯ ಮಕ್ಕಳ ಬೆಳವಣಿಗೆಗೆ ಗಟ್ಟಿತನವನ್ನು ರೂಪಿಸಲಿದೆ ಎಂದು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದರು.
ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್‍ಸ ಆಯೋಜಿಸಿದ್ದ ಬೇಸಿಗೆ ಬಂಡಿ ಹೆಸರಿನ 15 ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳು ಮಾನಸಿಕವಾಗಿ ಸಧೃಢವಾಗಲು ಹಾಗೂ ಅವರಲ್ಲಿನ ಬೌದ್ಧಿಕ ಪ್ರಜ್ಞೆ ವಿಕಸಿತಗೊಳ್ಳಲು ಮಕ್ಕಳು ನಮ್ಮ ತಲೆಮಾರು ಪರಂಪರೆ ಅನುಭವಿಸುವ ವಾತಾವರಣ ಕಲ್ಪಿಸುವುದು ಅನಿವಾರ್ಯ. ಆದರೆ, ನಗರೀಕರಣದ ಬೆಳವಣಿಗೆಯಲ್ಲಿ ಮಕ್ಕಳು ತಮಗೆ ಬಾಲ್ಯದಲ್ಲಿ ಸಿಗಬೇಕಾದ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವೇಗವಾಗಿ ಓಡುತ್ತಿರುವ ಆಧುನಿಕ ಜಗತ್ತಿನಲ್ಲಿ ನಮ್ಮ ಮಕ್ಕಳು ಬಾಲ್ಯಸುಖ ಕಳೆದುಕೊಂಡು ಏಕಾಕಿತನ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಈ ನಿಟ್ಟಿನಲ್ಲಿ ಪೆÇೀಷಕರಿಗೆ ಎಷ್ಟೇ ಒತ್ತಡ, ಸಮಯ ಕೊರತೆಗಳು ಇದ್ದರೂ ಮಕ್ಕಳಿಗಾಗಿ ಸಮಯ ಮಾಡಿಕೊಂಡು ಅವರಿಗೆ ಸಹಜ ಬಾಲ್ಯ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ತಮ್ಮ ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಕೊಂಡು, ನೈಜ ಶಿಕ್ಷಣ ಪರಿಚಯಿಸಬೇಕಿದೆ.
ಈ ನಿಟ್ಟಿನಲ್ಲಿ ಮೈಸೂರಿನ ನೈಪುಣ್ಯ ಶಿಕ್ಷಣ ಸಂಸ್ಥೆ ತನ್ನ ಶಿಕ್ಷಣ ವಿಧಾನದಲ್ಲಿ ನಮ್ಮ ನೆಲದ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆ ಪರಿಚಯಿಸುವ ಕಾರ್ಯಕ್ರಮ ಅಳವಡಿಸಿಕೊಂಡಿದೆ. ಇದರ ಜತೆಗೆ ಬೇಸಿಗೆ ಶಿಬಿರ ಏರ್ಪಡಿಸಿ ಬೇಸಿಗೆ ಬಂಡಿ ಹೆಸರಿನಲ್ಲಿ ಮಕ್ಕಳಿಗೆ ದೇಶೀಯತೆಯ ಪರಿಚಯ ಮಾಡಿಸುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಸಂಸ್ಥೆಯ ಅಧ್ಯಕ್ಷ ಆರ್. ರಘು ಮಾತನಾಡಿ, ಪರಂಪರೆಯ ಕಟ್ಟಡಗಳು ಇನ್ನೂ ತಮ್ಮ ಗಟ್ಟಿತನ ಉಳಿಸಿಕೊಂಡಿದೆ. ಆದರೆ, ಈಚಿನ ವರ್ಷಗಳಲ್ಲಿ ನಿರ್ಮಾಣವಾದ ಕಟ್ಟಡಗಳಲ್ಲಿ ಅಸ್ಥಿರತೆ ಎದ್ದು ಕಾಣಿತ್ತಿದೆ. ಇದರ ಅರ್ಥ ಏನೆಂದರೆ ಮಕ್ಕಳನ್ನು ಆಚಾರ-ವಿಚಾರ, ಸಂಸ್ಕೃತಿಗಳ ಅನುಭವದೊಂದಿಗೆ ಬೆಳೆಸಿದರೆ ಅವರು ಗಟ್ಟಿಯಾಗುತ್ತಾರೆ. ಮಕ್ಕಳು ಗಟ್ಟಿಯಾಗಿ ರೂಪುಗೊಳ್ಳಲು ಅವರಿಗೆ ಯಾವುದೇ ನಿರ್ಬಂಧ ವಿಧಿಸದೇ ಅವರ ಆಸಕ್ತಿಯನ್ನು ಗ್ರಹಿಸಿ ಉತ್ತೇಜಿಸಬೇಕು ಎಂದರು.
ಶಿಬಿರದ ಸಂಯೋಜಕಿ ದೇಚಮ್ಮ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಸಂಸ್ಥೆಯ ಅಕಾಡೆಮಿಕ್ ಡೀನ್ ವಿಜಯಾ ಅಯ್ಯರ್ ಹಾಜರಿದ್ದರು. ಬಳಿಕ ನಾನಾ ಪ್ರಕಾರಗಳ ನೃತ್ಯ ಹಾಗೂ ಡಾ ಚಂದ್ರಶೇಖರ ಕಂಬಾರರ ಪುಷ್ಪರಾಣಿ ನಾಟಕ ಪ್ರದರ್ಶನ ನಡೆಯಿತು.