ದೇಶದ ನಿಜವಾದ ಜಗದ್ಗುರು ಭಗವಾನ್ ಬುದ್ಧ
ಸಂಜೆವಾಣಿ ನ್ಯೂಸ್
ಮೈಸೂರು: ಏ.29:- ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಋಣದಿಂದ ಬದುಕುತ್ತಿರುವವರೇ ಇಂದು ಅವರ ತತ್ತ್ವ-ಸಿದ್ಧಾಂತ ಮರೆತು, ಎಲ್ಲವೂ ದೇವರಿಂದಲೇ ಗಳಿಸಿದ್ದೇವೆ ಎಂದು ದೇವಸ್ಥಾನಗಳಿಗೆ ಗಿರಕಿ ಹೊಡೆಯುತ್ತಿದ್ದಾರೆ. ಅನಕ್ಷರಸ್ಥರಿಗಿಂತಲೂ ಅಕ್ಷರಸ್ಥರೇ ಮೂರ್ಖರಂತೆ ವರ್ತಿಸುತ್ತಿರುವುದು ದುರಂತ ಎಂದು ಮಹಾರಾಷ್ಟ್ರದ ನಾಗ್ಪುರ ವಿಪಶ್ಯನ ಕೇಂದ್ರದ ವಿನಯ ರಕ್ಖಿತ ಭಂತೇಜಿ ಹೇಳಿದರು.
ಮಾನಸಿನಗರದಲ್ಲಿರುವ ಬೋಧಿಸತ್ವ ಧ್ಯಾನ ಮಂದಿರದಲ್ಲಿ ಬ್ಟೆ?-ಬೋಧಿಸತ್ವ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಟ್ರಸ್ ಟನಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಸತ್ಯದ ಅನ್ವೇಷಣೆ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರ ಮೊರೆ ಹೋದರೆ ಎಲ್ಲವೂ ಪರಿಹಾರವಾಗುತ್ತದೆ ಎಂಬುದು ಸುಳ್ಳು. ಶಿಕ್ಷಣ ಎಂಬುದು ಬೇಡುವುದನ್ನು ಕಲಿಸುವುದಿಲ್ಲ, ಗಳಿಸುವುದನ್ನು ಕಲಿಸುತ್ತದೆ. ಶಿಕ್ಷಣದಿಂದ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಎಲ್ಲರಿಗೂ ಜಾತಿ, ಧರ್ಮ, ಭೇದವಿಲ್ಲದೆ ಅವಕಾಶಗಳು ದೊರಕಿವೆ ಎಂದು ಹೇಳಿದರು.
ಭಗವಾನ್ ಬುದ್ಧ, ಸಾಮ್ರಾಟ್ ಅಶೋಕ, ಜ್ಯೋತಿ ಬಾಫುಲೆ, ಬಾಬಾ ಸಾಹೇಬ್ ಅಂಬೇಡ್ಕರ್, ಛತ್ರಪತಿ ಸಾಹು ಮಹಾರಾಜ್ ಮುಂತಾದ ಮಹನೀಯರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ದೇಶದ ಕಲ್ಯಾಣಕ್ಕಾಗಿ ದುಡಿದರು.
ಈ ದೇಶದ ನಿಜವಾದ ಜಗದ್ಗುರು ಭಗವಾನ್ ಬುದ್ಧ. ಬುದ್ಧ ಭಾರತದ ಹೆಗ್ಗುರುತು ಕೂಡ ಎಂದು ಹೇಳಿದರು.
ನಾವು ಬೇರೆ ದೇಶಗಳಿಗೆ ಹೋದರೆ ಬುದ್ಧರ ನಾಡಿನಿಂದ ಬಂದಿದ್ದೇವೆ ಎಂದು ಹೇಳುತ್ತೇವೆಯೇ ಹೊರತು, ರಾಮನ ನಾಡಿನಿಂದ ಬಂದಿದ್ದೇವೆ ಎಂದು ಹೇಳುವುದಿಲ್ಲ. ಮಾನವರ ಕಲ್ಯಾಣಕ್ಕಾಗಿ ದುಡಿದ ಭಗವಾನ್ ಬುದ್ಧ, ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ತತ್ತ್ವ ಬೋಧಿಸಿದ. ಬೌದ್ಧಧರ್ಮದಲ್ಲಿ ಶೀಲವೇ ಮೊದಲ ಅಡಿಪಾಯವಾಗಿದೆ. ಶೀಲ (ಚಾರಿತ್ರ್ಯ), ಸಮಾಧಿ (ಧ್ಯಾನಸ್ಥ ಸ್ಥಿತಿ), ಪ್ರಜ್ಞೆ (ಜ್ಞಾನ) ಈ ಮೂರು ಗುಣಗಳಿಂದ ಇದು ವಿಶ್ವದ ಧರ್ಮವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ಕೊಳ್ಳೇಗಾಲ ತಾಲೂಕಿನ ಚೆನ್ನಾಲಿಂಗನಹಳ್ಳಿ ಜೇತವನ ಬುದ್ಧವಿಹಾರದ ಮನೋರಕ್ಕಿತ ಭಂತೇಜಿ ಮಾತನಾಡಿ, ಮನಸ್ಸಿನಲ್ಲಿ ಬೇರೂರಿರುವ ಅಂಧಕಾರವನ್ನು ಹೋಗಲಾಡಿಸಲು ಬುದ್ಧ ಮತ್ತು ಬಾಬಾಸಾಹೇಬರು ಜ್ಞಾನದ ಬೆಳಕನ್ನು ಚೆಲ್ಲಿದರು. ಆದ್ದರಿಂದ ಶಿಕ್ಷಣ ಪಡೆದ ಪ್ರತಿಯೊಬ್ಬರೂ ಅಜ್ಞಾನದ ಕತ್ತಲೆಯಿಂದ ಜ್ಞಾನದ ಕಡೆಯತ್ತ ಮುಖಮಾಡಿದಾಗ ಅಭಿವೃದ್ಧಿಯ ಬಾಗಿಲು ತೆರೆದುಕೊಳ್ಳುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಬುದ್ಧ-ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಧ್ಯಾನ ನಡೆಯಿತು. ಡಾ.ಜಗನ್ನಾಥ್, ಡಾ.ಶ್ವೇತಾ, ರವಿಕೀರ್ತಿ, ನಂಜುಂಡಸ್ವಾಮಿ, ನೆಲೆ ಹಿನ್ನೆಲೆ ಗೋಪಾಲ್, ಚಂದ್ರು, ಪುಟ್ಟಸ್ವಾಮಿ, ಪ್ರಾಧ್ಯಾಪಕ ಡಾ.ವಿ.ಷಣ್ಮುಗಂ, ಪುಟ್ಟಮ್ಮಣ್ಣಿ, ರಾಜಮ್ಮ, ಉತ್ತಂಬಳ್ಳಿ ನಾಗರಾಜು, ದೊಡ್ಡಯ್ಯ, ಬಾಲು, ನಿಸರ್ಗ ಸಿದ್ಧರಾಜು, ಜಗದೀಶ್, ರೂಪೇಶ್, ವಿಜಯಕುಮಾರ್, ವಿಶಾಲ್ ಹಾಜರಿದ್ದರು.