ಬಿಜೆಪಿ ಅಭ್ಯರ್ಥಿ ತವರೂರು ಅಥರ್ಗಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರರಿಗೆ ಅಭೂತಪೂರ್ವ ಸ್ವಾಗತ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.29:ಬಿಜೆಪಿ ಅಭ್ಯರ್ಥಿ ತವರೂರು ಅಥರ್ಗಾದಲ್ಲಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು.
ಇಂಡಿ ಕ್ಷೇತ್ರದ ಅಥರ್ಗಾದಲ್ಲಿ ನಡೆದ ಪ್ರಚಾರ ಸಭೆ ಕಾಂಗ್ರೆಸ್‍ಗೆ ಮತ್ತಷ್ಟು ಆತ್ಮವಿಶ್ವಾಸ ತುಂಬಿತು. ಪಕ್ಷದ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಅವರು ಕಾಲೇಜು ಪ್ರಾಧ್ಯಾಪಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಊರಿದು. ಮೇಲಾಗಿ ಬಿಜೆಪಿ ಅಭ್ಯರ್ಥಿಯ ಊರು ಕೂಡ ಹೌದು.
ಸಭೆಗೂ ಮುನ್ನ ಆಲಗೂರರು ಮತ್ತು ಶಾಸಕÀ ಯಶವಂತರಾಯಗೌಡ ಪಾಟೀಲ ಅವರು ಅಥರ್ಗಾ ಹೊರ ವಲಯ ತಲುಪುತ್ತಿದ್ದಂತೇ ಪಟಾಕಿ ಸದ್ದು, ಊರವರ ಕೇಕೆ ಕಿವಿಗಪ್ಪಳಿಸುತ್ತಿತ್ತು. ವಾಹನದಿಂದ ನಾಯಕರನ್ನು ಇಳಿಸಿ ವೇದಿಕೆಯ ಸ್ಥಳದ ವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು. ಹಲಗಿ, ಭಾಜಾ ಭಜಂತ್ರಿ, ಕುಣಿತಗಳು ಮೆರಗು ತಂದಿತು. ಈ ಸಲ ಬದಲಾವಣೆ ಖಂಡಿತ, ಅದು ನಮ್ಮೂರಿನಿಂದಲೇ ಶುರು ಎಂದು ಸೇರಿದ್ದ ಅಪಾರ ಜನರು ಹೇಳುತ್ತಿದ್ದರು. ಈ ಬಾರಿ ನೀವು ಗೆದ್ದೇ ಗೆಲ್ಲುತ್ತೀರಿ ಎಂದು ಅವರೆಲ್ಲ ಅಭಯ ನೀಡಿದರು. ಇದನ್ನು ಕಂಡು ಮನಸ್ಸು ಹಗುರ ಮಾಡಿಕೊಂಡ ಆಲಗೂರರು, ನಿಮ್ಮ ಸೇವೆಗೆ ನೀವು ಕಲ್ಪಿಸುವ ಸದವಕಾಶ ಎಂದು ಧನ್ಯತೆಯಿಂದ ಕೈಮುಗಿದರು.
ಅನಂತರ ಸಭೆಯಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು, ನೀವು ನಿಮ್ಮೂರವರಿಗೆ ಬಹಳ ಅವಕಾಶ, ಅಧಿಕಾರ ನೀಡಿದ್ದೀರಿ. ಆದರೆ ನಿಮಗೆ ಅವರು ವಾಪಸು ಏನು ಕೊಟ್ಟರು? ಸುಮಾರು ಐವತ್ತು ವರ್ಷಗಳಿಂದ ಅಧಿಕಾರ ಅನುಭವಿಸಿದರೂ ನಿಮ್ಮ ಏಳ್ಗೆಗೆ ಶ್ರಮಿಸಲಿಲ್ಲ. ನಾವು ಕೆರೆ ತುಂಬಿಸಿದ್ದೇವೆ, ಲಿಂಬೆ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಮುಂದೂ ಅನೇಕ ಕೆಲಸಗಳು, ಶಾಶ್ವತ ನೀರಾವರಿ ಯೋಜನೆ ಆಗಲಿದೆ. ಪ್ರಾಧ್ಯಾಪಕರಾಗಿ ನಿಮ್ಮೂರಲ್ಲೇ ಸೇವೆ ಮಾಡಿರುವ ಆಲಗೂರರು ವಿದ್ಯಾವಂತ, ಪ್ರಬುದ್ಧರಾಗಿದ್ದಾರೆ. ಅವರಿಗೆ ಅವಕಾಶ ಸಿಕ್ಕರೆ ಸಂಸತ್‍ನಲ್ಲಿ ನಿಮ್ಮ ದನಿಯಾಗಲಿದ್ದಾರೆ ಎಂದರು.
ಆಲಗೂರ ಅವರು ಮಾತನಾಡಿ, ನಿಮ್ಮ ಅಭಿಮಾನ, ಪ್ರೀತಿ ಕಂಡು ಮೂಕನಾಗಿರುವೆ. ನನಗೆ ಮತ ನೀಡಿದರೆ ಇಷ್ಟು ವರ್ಷಗಳ ಕಾಲ ನೀವು ಅಭಿವೃದ್ಧಿಯಿಂದ ವಂಚಿತರಾಗಿದ್ದನ್ನು ಮರೆಮಾಚಿ, ಈ ವಿಜಯಪುರ ಲೋಕಸಭೆ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಹಗಲು-ರಾತ್ರಿ ಶ್ರಮಿಸುವೆ ಎಂದು ವಿನಮ್ರವಾಗಿ ಹೇಳಿದರು.
ಮುಖಂಡರಾದ ಜಟ್ಟೆಪ್ಪ ರವಳಿ, ಗುರಣ್ಣಗೌಡ ಪಾಟೀಲ, ಎಂ.ಆರ್. ಪಾಟೀಲ, ಎಸ್.ಅರ್.ಸಿಂದಗಿ, ಎಂ.ಆರ್.ಪತಂಗಿ, ರೇವಣಸಿದ್ಧ ಅಂಕಲಗಿ, ಇಲಿಯಾಸ್ ಬೋರಾಮಣಿ, ಜಾವೇದ್ ಮೋಮಿನ್ ಸೇರಿದಂತೆ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ತೊರೆದು ಅನೇಕರು ಕಾಂಗ್ರೆಸ್ ಪಕ್ಷವನ್ನು ಸೇರಿದರು.