ಮೇ 1 ರಂದು ವಿಶ್ವ ಕಾರ್ಮಿಕರ ದಿನಾಚರಣೆ
ಕಲಬುರಗಿ:ಏ.28: ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಪೂರಕ ವಾತಾವರಣ ಸೃಷ್ಟಿಸುವ ಸದಾಶಯದೊಂದಿಗೆ ಸಿಐಟಿಯು ಜಿಲ್ಲಾ ಘಟಕದ ವತಿಯಿಂದ ಮೇ 1ರಂದು ಬೆಳಗ್ಗೆ 11ಕ್ಕೆ ನಗರದ ಕನ್ನಡ ಭವನದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸಂಪೂರ್ಣ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳುವ ಮೂಲಕ ಕೇಂದ್ರ ಸರಕಾರವು ಕಾರ್ಮಿಕರ ಪರ ವಾತಾವರಣ ರೂಪಿಸಿವಂತೆ ಒತ್ತಡ ಹೇರಲಾಗುವುದು ಎಂದರು.
ಸಿಐಟಿಯು ಜಿಲ್ಲಾ ಮುಖಂಡರಾದ ಶಾಂತಾ ಘ‌ಂಟಿ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಪ್ರಬಲವಾಗಿ ಖಂಡಿಸಿದ ಅವರು, ಇತ್ತೀಚೆಗೆ ಅಮೆರಿಕಾ, ಇಂಗ್ಲೆಂಡ್ ಹಾಗೂ ಯೂರೋಪ್ ದೇಶಗಳು ಇಸ್ರೇಲ್ ದಾಳಿಯನ್ನು ಖಂಡಿಸಿರುವುದನ್ನು ಸಿಐಟಿಯು ಸ್ವಾಗತಿಸುತ್ತದೆ ಎಂದರು.
ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲಗೊಂಡಿರುವ ಕೇಂದ್ರ ಸರಕಾರ ಬಂಡವಾಳಶಾಹಿ ವ್ಯವಸ್ಥೆಗೆ ತನ್ನ ಸಂಪೂರ್ಣ ಬೆಂಬಲ ನೀಡುತ್ತಿದೆ. ಹಾಗಾಗಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಹಿರಿಯ ಕಾರ್ಮಿಕ ಮುಖಂಡ ಸಜ್ಜನ್ ಕರೆ ನೀಡಿದರು.
ನಾಗಯ್ಯ ಸ್ವಾಮಿ, ಅಯ್ಯಪ್ಪ ಕರಗಾರ, ಜಮೀರ್ ಅಹ್ನದ್, ಯಶ್ವಂತ ಪಾಟೀಲ್, ಬಾಬು ಹೂವಿನಹಳ್ಳಿ ಇತರರಿದ್ದರು