ಗ್ಯಾರಂಟಿ ಯೋಜನೆಗಳ ಕಡಿವಾಣಕ್ಕೆ ಬಿಜೆಪಿ ಹುನ್ನಾರ: ಪ್ರಿಯಾಂಕ್ ಖರ್ಗೆ
ಚಿತ್ತಾಪುರ:ಏ.28: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಆದರೆ ಬಿಜೆಪಿ ಪಕ್ಷ ನಮ್ಮ ಐದು ಯೋಜನೆಯ ಗ್ಯಾರಂಟಿಗಳನ್ನು ಕಡಿವಾಣ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮತಕ್ಷೇತ್ರದ ಭೀಮನಹಳ್ಳಿ, ಅಲ್ಲೂರ (ಬಿ) ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಮಾತನಾಡಿದ ಅವರು ರಾಜ್ಯದ ಜನರ ಕುಟುಂಬದ ನಿರ್ವಹಣೆ ಹಾಗೂ ಆರ್ಥಿಕ ಸ್ಥಿರತೆ ರೂಪಿಸುವ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿಸಲು ಬಿಜೆಪಿ ಹುನ್ನಾರ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿ ಸದರಿ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಕೋರಿದ್ದಾರೆ. ಬಿಜೆಪಿ ನಾಯಕರೇ ಕಾಂಗ್ರೆಸ್ ಸರ್ಕಾರದ ಬಡವರ ಪರ ಕಾರ್ಯಕ್ರಮಗಳನ್ನು ನಿಲ್ಲಿಸುವ ಯತ್ನ ಮಾಡಿದ್ದೀರಲ್ಲ. ಬಡವರು ಕಂಡರೆ ಯಾಕೆ ನಿಮಗೆ ಅಸಮಾಧಾನ? ನಾವು ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ 1.09 ಲಕ್ಷ ಕುಟುಂಬಗಳಿಗೆ ಆರ್ಟಿಕಲ್ 371(ಎ) ಅಡಿಯಲ್ಲಿ ಸೌಲಭ್ಯ ಸಿಕ್ಕಿದೆ. ಇದೂವರೆಗೆ 2.20 ಲಕ್ಷ ಇಂಜಿನಿಯರಿಂಗ್, 8 ಸಾವಿರ ಮೆಡಿಕಲ್ ಅದರಲ್ಲಿ ಈ ಸಾಲಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಸೀಟುಸಿಕ್ಕಿವೆ. ಕನಿಷ್ಠ 30,000 ಕ್ಕೂ ಅಧಿಕ ಕಾಮಗಾರಿಗಳನ್ನು ಜಾರಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ತುಂಬಲಾಗುವುದು. ಖರ್ಗೆ ಸಾಹೇಬರ ಅವಿರತ ಶ್ರಮದಿಂದಾಗಿ ಇದು ಸಾಧ್ಯವಾಗಿದೆ ಎಂದರು.
ಬಿಜೆಪಿಯವರೇ ತಿರಸ್ಕಾರ ಮಾಡಿರುವ ಜಾಧವ ಅವರಿಗೆ ನೀವು ಯಾಕೆ ಪುರಸ್ಕಾರ ಮಾಡಬೇಕು? ಜಾಧವ್ ನಾಮಕಾವಾಸ್ಥೆ ಕಲಬುರಗಿ ಎಂಪಿ. ಅವರು ಜಾಸ್ತಿ ಇರುವುದೇ ಚಿಂಚೋಳಿಯಲ್ಲಿ ನಿಮಗೆ ಕಲಬುರಗಿ ಎಂಪಿ ಬೇಕಾದರೆ ರಾಧಾಕೃಷ್ಣ ಅವರಿಗೆ ಮತ ನೀಡಿ. ಚಿತ್ತಾಪುರ- ಕಲಬುರಗಿಯ ಅಭಿವೃದ್ದಿಯಾಗಬೇಕಾದರೆ ರಾಧಾಕೃಷ್ಣ ಅವರಿಗೆ ಗೆಲ್ಲಿಸಿರಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಗನಗೌಡ ಪಾಟೀಲ ರಾಮತೀರ್ಥ, ಶಿವರುದ್ರ ಭೇಣಿ, ಸೇರಿದಂತೆ ಇತರರು ಇದ್ದರು.