ಮೋದಿಯವರಿಂದ ಬರ ಪರಿಹಾರಕ್ಕಾಗಿ ರಾಜ್ಯಕ್ಕೆಮೂರುವರೆ ಸಾವಿರ ಕೋಟಿ ಬಿಡುಗಡೆ: ಶ್ರೀರಾಮುಲು
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.28: ರಾಜ್ಯದಲ್ಲಿನ ಬರಪರಿಹಾರ ನೀಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಮೀನಾ ಮೇಷ ಮಾಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಾಜ್ಯಕ್ಕೆ 3454 ಕೋಟಿ ರೂ ಬಿಡುಗಡೆ ಮಾಡಿದೆ. ಅದನ್ನು ರಾಜ್ಯ ಸರ್ಕಾರ ರೈತರ ಖಾತೆಗೆ ನೇರವಾಗಿ ಹಾಕಬೇಕಿದೆಂದು ಬಜೆಪಿ ಅಭ್ಯರ್ಥಿ ಶ್ರೀರಾಮುಲು ಮತದಾರರಿಗೆ ಮನವರಿಕೆ ಮಾಡಿದ್ದಾರೆ.
ಅವರು ನಿನ್ನೆ ಸಂಜೆ ತಾಲೂಕಿನ ಮೋಕಾ, ಎರ್ರಗುಡಿ, ಗೋನಾಳ್, ಬೆಣಕಲ್ ಮೊದಲಾದ ಗ್ರಾಮಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿ ಮಾತನಾಡುತ್ತಿದ್ದರು.
ಬರಪರಿಹಾರ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಕಾಂಗ್ರೆಸ್  ನಿಲ್ಲಿಸಲಿ. ಸಂಕಷ್ಟದ ಸಂದರ್ಭದಲ್ಲಿ ರಾಜ್ಯಕ್ಕೆ ಬರ ಪರಹಾರ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಎಂದರು. ಚುನಾವಣಾ ನೀತಿ ಸಂಹಿತೆ ಜಾರಿಯಲಿದ್ದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯಕ್ಕೆ ಬರ ಪರಿಹಾರ ನೀಡಿರುವುದು, ರಾಜ್ಯದ ರೈತರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇರುವ ಕಾಳಜಿ ತೋರಿಸುತ್ತದೆ. ಬರ ಪರಿಹಾರ ಪಡೆಯಲು ಇರುವ ನಿಯಮಗಳನ್ನು ರಾಜ್ಯ ಸರಕಾರದವರು ಸರಿಯಾಗಿ ಪಾಲನೆ ಮಾಡಲಿಲ್ಲ. ಅದರಲ್ಲಿ ರಾಜಕಾರಣ ಮಾಡುತ್ತ ಕಾಲಹರಣ ಮಾಡಿದರು.ಇವರು ಸರಿಯಾಗಿ ನಿಯಮ ಪಾಲಿಸಿದ್ದರೆ ಇಷ್ಟೊತ್ತಿಗಾಗಲೆ ಪರಿಹಾರ ಬಂದು ಬಿಡುತ್ತಿತ್ತು. ಕೇಂದ್ರ ಸರಕಾರ ಯಾವತ್ತೂ ಪರಿಹಾರ ಕೊಡುವುದಿಲ್ಲ ಎಂದು ಹೇಳಿಲ್ಲ ಇವರು ಪರಿಹಾರ ಕೊಡಲು ಕೇಳಬೇಕಾದ ರೀತಿಯಲ್ಲಿ ಕೇಳಿಲ್ಲ ಆದರೂ ಕೇಂದ್ರ ಸರ್ಕಾರ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಆಯೋಗದ ಅನುಮತಿ ಪಡೆದು ಬರ ಪರಿಹಾರ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯ ಸರಕಾರ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.
 ಕಾಂಗ್ರೆಸ್ ನವರು ಹತಾಶರಾಗಿದ್ದಾರೆ, ಕೊನೆಯ ಅಸ್ತ್ರವಾಗಿ ಭಾವನಾತ್ಮಕಾಗಿ ಸೆಳೆಯುವ ತಂತ್ರ ಮಾಡುತ್ತಿದ್ದಾರೆ
ದಲಿತರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮೋದಿಯವರು ಪ್ರಧಾನಿ ಆದ ತಕ್ಷಣ ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. ಯಾರೇ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಕಾಂಗ್ರೆಸ್ ನವರು ಅದರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆಂದರು.
ಎಲ್ಲವೂ ಗೆಲುವು:
ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದಿರುವ 14 ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ 14ರಲ್ಲೂ ಗೆಲ್ಲುವ ವಿಶ್ವಾಸ ಇದೆ  ಒಂದೆರಡು ಕ್ಷೇತ್ರಗಳಲ್ಲಿ ಫೈಟ್ ಇದೆ. ಕೊನೆ ಗಳಿಗೆಯಲ್ಲೂ ಅಲ್ಲಿಯೂ ನಮ್ಮ ಪರವಾದ ವಾತವಾರಣ ಬಂದಿದೆ. ಅದರ ಪರಿಣಾಮ ಉತ್ತರ ಕರ್ನಾಟಕ ಭಾಗದಲ್ಲೂ ಆಗುತ್ತದೆ. ನಿಮ್ಮೆಲ್ಲರ ಆಶಿರ್ವಾದ ಮುಖ್ಯ  ಎಂದರು.