ಕಡ್ಡಾಯ ಮತದಾನದಿಂದ ಪ್ರಜಾಪ್ರಭುತ್ವ ಸದೃಢ
ಕಲಬುರಗಿ :ಏ.28: ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದ್ದು, ಅರ್ಹ ಎಲ್ಲಾ ಮತದಾರರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಆಸೆ-ಆಕಾಂಕ್ಷೆಗಳಿಗೆ ಒಳಗಾಗದೇ, ಪ್ರಜ್ಞಾಪೂರ್ವಕವಾಗಿ ಮತ್ತು ಸೂಕ್ತ ವ್ಯಕ್ತಿಗೆ ಮತದಾನ ಮಾಡಿ, ಚುನಾಯಿಸಿದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢ, ಯಶಸ್ವಿಯಾಗಲು ಸಾಧ್ಯವಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಶಿವಾ ವಿದ್ಯಾ ಮಂದಿರ ಪ್ರೌಢಶಾಲೆ’ಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ಮತದಾನ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಸಿ.ಗಾರಂಪಳ್ಳಿ ಮಾತನಾಡಿ, ಜ್ಞಾನಿಯಾಗಿರುವ ಮತ್ತು ಸಮಾಜದ ಬಗ್ಗೆ ನಿಜವಾದ ಕಳಕಳಿಯುಳ್ಳ ವ್ಯಕ್ತಿಯನ್ನು, ಯಾವುದೇ ಆಸೆ-ಆಮಿಸೆಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಮತದಾನ ಮಾಡಿ ಚುನಾಯಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಹಾದೇವಪ್ಪ ಸಿ.ಗಾರಂಪಳ್ಳಿ, ಶುಭಂ ಎಂ.ಗಾರಂಪಳ್ಳಿ, ಪ್ರಕಾಶಸಿಂಗ ರಾಠೋಡ್, ನಾಗಮ್ಮ ಸೇರಿದಂತೆ ಮತ್ತಿತರರಿದ್ದರು.