ಬರ ಪರಿಹಾರದಲ್ಲಿ ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ಅಂಕಿ-ಸಂಖ್ಯೆ ಸಹಿತ ಅಶ್ವತ್ಥನಾರಾಯಣಗೌಡ ವಾಗ್ದಾಳಿ
.
ಸಂಜೆವಾಣಿ ಪ್ರತಿನಿಧಯಿಂದ
ಹೊಸಪೇಟೆ ವಿಜಯನಗರ, ಏ.28: ಯುಪಿಎ ಸರ್ಕಾರದ ಅವಧಿಗಿಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನೀಡಿರುವ ಬರ ಪರಿಹಾರ ಮೊತ್ತವೇ ಹೆಚ್ಚು. ಎಲ್ಲ ಅಂಕಿ ಸಂಖ್ಯೆಗಳನ್ನು ಗೊತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಪೊಳ್ಳು ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣಗೌಡ ಆರೋಪಿಸಿದರು.
ಲೋಕಸಭೆ ಚುನಾವಣೆ ನಿಮಿತ್ತ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಿಜೆಪಿ ಬೃಹತ್ ರ‍್ಯಾಲಿಯ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಆಡಳಿತದ ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಬಂದಿದ್ದ3550 ಕೋಟಿ ರೂ. ಆದರೆ, ಪ್ರಸಕ್ತ ಬರಗಾಲಕ್ಕೆ ಇದೀಗ 3450 ಕೋಟಿ ರೂ. ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅಡಳಿತದ 10 ವರ್ಷದಲ್ಲಿ ಬರೋಬ್ಬರಿ 15995 ಕೋಟಿ ರೂ. ರಾಜ್ಯಕ್ಕೆ ಬಿಡುಗಡೆಯಾಗಿದೆ.
ಈ ಬಾರಿ 18 ಸಾವಿರ ಕೋಟಿ ರೂ. ಬರ ಪರಿಹಾರ ಕೇಳಿರುವ ರಾಜ್ಯ ಸರ್ಕಾರ, ನಾವು ಕೇಳಿದಷ್ಟು ಬಿಡುಗಡೆಯಾಗಿಲ್ಲ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಬರ ಪರಿಹಾರ ಎನ್‌ಡಿಆರ್‌ಎಫ್ ನಿಯಮ, ಕೇಂದ್ರ ಕೃಷಿ ಬೆಲೆ ಆಯೋಗದ ನಿರ್ದೇಶನದಂತೆ ಪರಿಹಾರ ನೀಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಮೋದಿ ಪರಿಹಾರದ ಮೊತ್ತವನ್ನು ಹೆಚ್ಚಿಸಿದ್ದಾ ರೆ. ಆದರೂ,  ಅಪಪ್ರಚಾರ ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶವಾಗಿದೆ. ತಾನು ಮಾಡಿದ ಲೋಪಗಳನ್ನು ಮರೆ ಮಾಚಲು ಕೇಂದ್ರದ ವಿರುದ್ಧ ಗೂಭೆ ಕೂರಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಈ ಬಾರಿ ಲೋಕಸಭೆ ಚುನವಣೆಯನ್ನುರಾಷ್ಟ್ರೀಯ ಮಟ್ಟದ ಎಲೆಕ್ಷನ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಗಣಿಸಿದಂತಿಲ್ಲ. ಐಎನ್‌ಡಿಐಎ ಅಡಿ ಹಲವು ಪಕ್ಷಗಳು ಮೈತ್ರಿಯಾಗಿದ್ದರೂ, ರಾಹುಲ್ ಗಾಂಧಿ ಹೊರತಾಗಿ ರಾಷ್ಟ್ರ ಮಟ್ಟದ ಯಾವ ನಾಯಕರೂ ರಾಜ್ಯದಲ್ಲಿ ಪ್ರಚಾರಕ್ಕೆ ಬರಲಿಲ್ಲ. ಗ್ಯಾರೆಂಟಿಗಳನ್ನು ಹೊರತಾಗಿ, ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಪ್ರಸ್ತಾಪಿಸಿಲ್ಲ. ಕೇಂದ್ರದ ಅನೇ ಕ ಅಭಿವೃದ್ಧಿಗಳನ್ನು ಮತದಾರರು ಗಮನಿಸಿದ್ದಾರೆ. ಮೊದಲ ಹಂತದ ಮತದಾನ ಗಮನಿಸಿದರೆ, ಹಳೇ ಮೈಸೂರು ಭಾಗದಲ್ಲಿ ಈ ಬಾರಿ ೩ ಜೆಡಿಎಸ್ ಸೇರಿದಂತೆ ೧೪ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ವೈ.ಎಂ.ಸತೀಶ್, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಪಾಟೀಲ, ಅನಿಲ್ ಕುಮಾರ್ ನಾಯ್ದು, ಬಿಜೆಪಿ ರಾಜ್ಯ ಯುವ ಕೋಶಾಧ್ಯಕ್ಷ ಸಿದ್ಧಾರ್ಥ ಸಿಂಗ್, ಪ್ರಮುಖರಾದ ಓದೋ ಗಂಗಪ್ಪ, ರಾಮಣ್ಣ ಬ್ಯಾಲಹುಣಸಿ ಸ್ಥಳೀಯ ನಾಯಕರು ಪಾಲ್ಗೊಂಡಿದ್ದರು.