ಮೇ 7 ರಂದು ಮತ ಚಲಾಯಿಸಿ: ಜಿಲ್ಲಾಧಿಕಾರಿ
ಹುಬ್ಬಳ್ಳಿ, ಏ.28: ಜಿಲ್ಲೆಯಲ್ಲಿ ಹೆಚ್ಚಿನ ಮತದಾನವಾಗುವ ನಿಟ್ಟಿನಲ್ಲಿ ಮತದಾರರು ಮೇ 7 ರಂದು ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ. ಹೇಳಿದರು.
ಇಂದು ತೋಳನಕೆರೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಸ್ವಿಪ್ ಸಮಿತಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾರರ ಜಾಗೃತಿ ಅಭಿಯಾನದ ಅಂಗವಾಗಿ ನಮ್ಮ ನಡೆ ಮತಗಟ್ಟೆ ಕಡೆ ಘೋಷವಾಕ್ಯದ ಸೈಕ್ಲೋಥಾನ್, ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾರರಿಗೆ ತಮ್ಮ ಮತಗಟ್ಟೆ ಪರಿಚಯಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ 1660 ಮತಗಟ್ಟೆಗಳಲ್ಲಿ ಏಕಕಾಲಕ್ಕೆ ಚುನಾವಣಾ ಪರ್ವ ದೇಶದ ಗರ್ವ ಘೋಷ ವಾಕ್ಯದ ಬಟ್ಟೆಯ ಧ್ವಜಾರೋಹನ ನೇರವೆರಿಸಲಾಗುತ್ತಿದೆ. ಆ ಮೂಲಕ ಮತದಾರರು ತಮ್ಮ ಮತಗಟ್ಟೆಯ ಮಾಹಿತಿ ಪಡೆದುಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ ಎನ್ನುವುದರ ಕುರಿತು ಬಿಎಲ್‍ಒಗಳ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ. ಮತದಾರರಿಗೆ ಅನುಕೂಲವಾಗುವಂತೆ ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರು, ವಿಶೇಷಚೇತನರಿಗೆ ಗಾಲಿ ಕುರ್ಚಿ, ಬಿಸಿಲಿರುವ ಕಾರಣ ನೆರಳಿನ ವ್ಯವಸ್ಥೆ, ವೇಟಿಂಗ್ ಹಾಲ್, ಅಂಧ ಮತದಾರರಿಗಾಗಿ ಬ್ರೈಲ್ ಲಿಪಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲದೇ ಸಕ್ಷಮ ಅಪ್ಲಿಕೇಷನ್ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು. ಮಹಿಳೆಯರು, ಬಾಣಂತಿಯರಿಗಾಗಿ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರಬೇಕು ಎಂಬ ಉದ್ದೇಶದಿಂದ ಈ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೆಂಟ್ ಅಂಥೋನಿ ಶಾಲೆಗೆ ಭೇಟಿ ನೀಡಿ, ಪಿಂಕ್ ಸಖಿ ಬೂತ್ ( ಮತಗಟ್ಟೆ -95) ಅನಾವರಣಗೊಳಿಸಿದರು. ಹುಬ್ಬಳ್ಳಿಯ ಕಿಮ್ಸ್ ಕಾಲೇಜು ಆವರಣದ 109 ನೇ ಸಂಖ್ಯೆ ಮತಗಟ್ಟೆಯಲ್ಲಿ ಧ್ವಜಾರೋಹನ ನೆರವೇರಿಸಿದರು.
ತೋಳನಕೆರೆಯಿಂದ ಆರಂಭಗೊಂಡ ಮತದಾರರ ಜಾಗೃತಿ ಬೈಕ್ ಮತ್ತು ಸೈಕಲ್ ಜಾಥಾವು ಕಿಮ್ಸ್ ಆಸ್ಪತ್ರೆಗೆ ತಲುಪಿ ಕೊನೆಗೊಂಡಿತು.
ಜಿಲ್ಲಾ ಸ್ವಿಪ್ ಸಮಿತಿ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ್ ಟಿ.ಕೆ., ಸಹಾಯಕ ಚುನಾವಣಾಧಿಕಾರಿಗಳಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ, ಆರ್ ಜೆ ಮಾಧುರಿ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಕಿಮ್ಸ್ ಪ್ರಾಚಾರ್ಯರಾದ ಡಾ.ಈಶ್ವರ ಹೊಸಮನಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು, ಪೌರ ಕಾರ್ಮಿಕರು, ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.