ಡಾ.ರಾಜ್ ಗೆ ‘ಆಸ್ಕರ್’ ಪ್ರಶಸ್ತಿ ಬರಬೇಕಿತ್ತು
ಸಂಜೆವಾಣಿ ನ್ಯೂಸ್
ಮೈಸೂರು.ಏ.28:- ಪ್ರಪಂಚದ ಎಂಥಾ ಅದ್ಭುತ ನಟರ ಸಾಲಿನಲ್ಲಿ ಬೇಕಾದರೂ ನಿಲ್ಲಬಲ್ಲ, ನಿಂತು ಅವರನ್ನೆಲ್ಲಾ ಮೀರಿಸಬಲ್ಲ ಮಹದದ್ಭುತ ಪ್ರಚಂಡ ಪ್ರತಿಭಾ ಶಕ್ತಿಯಿದ್ಧ ನಮ್ಮ ಕನ್ನಡದ ಅಣ್ಣ ಜಗದ್ವಿಖ್ಯಾತ ಮೇರುನಟ ಡಾ. ರಾಜ್ ಕುಮಾರ್ ಅವರಿಗೆ ವಿಶ್ವ ಚಿತ್ರರಂಗದ ಅತ್ಯುನ್ನತ ಗೌರವ ಪುರಸ್ಕಾರವಾದ ಜಾಗತಿಕ ಮನ್ನಣೆಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಬರಬೇಕಿತ್ತೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.
ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆದ ಕರ್ನಾಟಕ ರತ್ನ, ಪದ್ಮಭೂಷಣ, ವರನಟ ಡಾ. ರಾಜ್ ಕುಮಾರ್ ಅವರ 95 ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳ್ಳಿಗಮಾರ, ಹುಚ್ಛ, ಬೆಪ್ಪ, ರೈತ, ಕಾರ್ಮಿಕ, ವೈದ್ಯ, ಕಳ್ಳ, ಪೆÇಲೀಸ್, ಪೆದ್ದ, ವಿಜ್ಞಾನಿ, ಸಂತ, ಭಗವಂತ, ಮಹಾಂತ, ಯೋಧ, ಜೇಮ್ಸ್ ಬಾಂಡ್ ಹೀಗೆ ಚಮ್ಮಾರನಿಂದ ಹಿಡಿದು ಚಕ್ರವರ್ತಿಯವರೆಗೆ ಬೆಳ್ಳಿ ತೆರೆಯಲ್ಲಿ ರಾಜ್ ಕುಮಾರ್ ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ಮಾಡಿದ ನಟ ಜಗತ್ತಿನಲ್ಲಿ ಮತ್ತೊಬ್ಬ ಸಿಗಲಾರರೆಂದರು.
ಮೂಲತಃ ವೃತ್ತಿರಂಗ ಭೂಮಿ ಮೂಲಕ ಚಿತ್ರರಂಗಕ್ಕೆ ಬಂದ ರಾಜ್ ಕುಮಾರ್ ರವರು ಉಭಯ ಕ್ಷೇತ್ರಗಳಲ್ಲೂ ಚಿರಸ್ಥಾಯಿಯಾಗುಳಿಯುವ ಅಮೋಘ ಅಭಿನಯ ನೀಡಿ ಕಲಾರಸಿಕರೆದೆಯಲ್ಲಿ ಶಾಶ್ವತವಾಗಿ ನಿಂತವರು. ರಂಗಭೂಮಿಯೂ ಸೇರಿದಂತೆ ಅಭಿನಯ ಜಗತ್ತಿನಲ್ಲಿ ವರನಟ ಡಾ.ರಾಜ್ ಕುಮಾರ್ ಸಾಧನೆ ಚಾರಿತ್ರಿಕವಾದದ್ದು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಜಾನಪದ, ಬಾಂಡ್ ಶೈಲಿಯ ಪತ್ತೇದಾರಿ ಚಿತ್ರಗಳು ಒಳಗೊಂಡಂತೆ ‘ಬೇಡರ ಕಣ್ಣಪ್ಪ’ ಚಿತ್ರದಿಂದ ಆರಂಭಿಸಿ ಶಬ್ದವೇಧಿ ತನಕ ಸುಮಾರು ಇನ್ನೂರೆಂಟು ಚಲನ ಚಿತ್ರಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿರುವ ಡಾ. ರಾಜಕುಮಾರ್ ಅವರ ಪ್ರತಿಯೊಂದು ಸಿನಿಮಾಗಳೂ ಸಮಾಜಕ್ಕೆ ಒಂದೊಂದು ಜೀವನ ಸಂದೇಶ ನೀಡುವ ಜನೋಪಯೋಗಿ ಚಿತ್ರಗಳೇ ಆಗಿವೆ. ಕಾಯಕದ ಮಹತ್ವ ಸಾರುವ ‘ಬಂಗಾರದ ಮನುಷ್ಯ’, ಕುಡಿತದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ‘ಜೀವನ ಚೈತ್ರ’ ಮುಂತಾದ ಸಿನಿಮಾಗಳು ಡಾ.ರಾಜ್ ನಟನೆಯಲ್ಲಿ ತೆರೆಗೆ ಬಂದ ಮೇಲಂತೂ ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ. ಜನಪರ ಕಾಳಜಿಯುಳ್ಳ ಒಬ್ಬ ಶ್ರೇಷ್ಠ ನಟ ತಮ್ಮ ನಟನೆಯ ಚಲನ ಚಿತ್ರಗಳಿಂದ ಸಮಾಜವನ್ನು ಪರಿವರ್ತನೆ ಮಾಡಬಲ್ಲ ಎಂಬುದಕ್ಕೆ ರಾಜ್ ಕುಮಾರ್ ರವರು ಕಣ್ಣ ಮುಂದಿನ ಸಾಕ್ಷಿ ಗಲ್ಲಿನಂತಿದ್ದರೆಂದು ಹೇಳಿದ ಬನ್ನೂರು ರಾಜು ಅವರು, ರಾಜ್ ಕುಮಾರ್ ರವರು ತಮ್ಮ ನಟನೆ ಮತ್ತು ಬದುಕಿನ ರೀತಿಯಿಂದ ಎಲ್ಲರಿಗೂ ಮಾದರಿಯಾಗಿದ್ದರೆಂದು ತಿಳಿಸಿದರು.
ಇದಕ್ಕೂ ಮುನ್ನ ಸಂಸ್ಕೃತಿ ಚಿಂತಕ ಡಾ.ಕೆ.ರಘು ರಾಮ್ ವಾಜಪೇಯಿ ಅವರು ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಅವರ ಕಲಾಸೇವೆಗೆ ಎಂದೋ “ಭಾರತ ರತ್ನ” ಪ್ರಶಸ್ತಿ ಬರಬೇಕಿತ್ತು. ಆದರೆ ಅವರು ಬದುಕಿದ್ದಾಗಲಂತೂ ಬರಲಿಲ್ಲ. ಹಾಗಾಗಿ ಈಗಲಾದರೂ ನಮ್ಮ ಕೇಂದ್ರ ಸರ್ಕಾರ ಮರಣೋತ್ತರ ವಾಗಿ ಡಾ.ರಾಜ್ ಕುಮಾರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಖ್ಯಾತ ರಂಗಕರ್ಮಿ ರಾಜಶೇಖರ ಕದಂಬ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವ ರಾಜೇಂದ್ರಸ್ವಾಮಿ ಅವರು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಲಯನ್ ಟಿ. ಸುರೇಶ್ ಹಾಗೂ ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಲತಾ ಸುದರ್ಶನ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಕುರಿತು ಮಾತನಾಡಿದರು. ಅನೇಕ ಮಂದಿ ಡಾ.ರಾಜ್ ಕುಮಾರ್ ಅಭಿಮಾನಿಗಳು ಭಾಗವಹಿಸಿದ್ದರಲ್ಲದೆ ಎಲ್ಲರೂ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.