ಸಾಹಿತ್ಯ ಜೇನಿನ ಹನಿ, ಆರೋಗ್ಯಕ್ಕೆ ಮದ್ದು
ಸಂಜೆವಾಣಿ ನ್ಯೂಸ್
ಮಂಡ್ಯ: ಸಾಹಿತ್ಯವೆಂಬುದು ಜೇನಿನ ಹನಿ ಇದ್ದಂತೆ. ಹೇಗೆ ಜೇನುತುಪ್ಪ ಸಿಹಿಯನ್ನು ನೀಡಿ ಔಷಧವಾಗಿ ಕೆಲಸ ನಿರ್ವಹಿಸವುದೋ ಹಾಗೆಯೇ ಸಾಹಿತ್ಯದ ಓದು ಮತ್ತು ಬರಹ ನಮಗೆ ಮುದ ನೀಡುವುದರ ಜತೆಗೆ ನಮ್ಮ ಬಾಳು ಸಹ್ಯವಾಗಲು ನೆರವಾಗುತ್ತದೆ. ಸಾಹಿತಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕು ತಗ್ಗಹಳ್ಳಿ ಗ್ರಾಮದ ಶ್ರೀರಾಮ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕವಿ,ಲೇಖಕ, ಪತ್ರಕರ್ತ ಸಬ್ಬನಹಳ್ಳಿ ಶಶಿಧರ ಅವರ 17ನೇ ಕೃತಿ ಗೀತಾಂಕುರ' ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿ, ಹಿಂದೆ ನಮ್ಮ ಮನೆಗಳಲ್ಲಿ ಗಾಂಧಿ, ಅಂಬೇಡ್ಕರ್, ವಿವೇಕಾನಂದರಂತಹ ಸಾಧಕರು, ಕವಿ-ಲೇಖಕರ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದೆವು. ಬದಲಾಗಿ ಈಗ ಮಾತ್ರೆಗಳನ್ನು ಇಟ್ಟುಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು. ಕಾಲದ ಮಹಿಮೆ ಎಂಬಂತೆ ಇಂದು ನಾವು ಓದು-ಬರಹಗಳಿಂದ ದೂರಾಗಿದ್ದೇವೆ. ಹಾಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದೇವೆ.ಗೀತಾಂಕುರ’ ಕೃತಿಕಾರನ ಮೊದಲ ಕವನ ಸಂಕಲನವಾಗಿದ್ದು, ಉತ್ತಮ ಶೀರ್ಷಿಕೆ. ಅವರ ಕಾವ್ಯ ಜಗತ್ತಿನ ಅಂಕುರವಾಗಿದೆ. 17 ಕೃತಿ ರಚಿಸಿ ನಮ್ಮ ಜಿಲ್ಲೆಯ ಅತಿದೊಡ್ಡ ಸಾಹಿತ್ಯದ ಆಸ್ತಿಯಾಗಿದ್ದಾರೆ. ಶೇ. 75ರಷ್ಟು ಪ್ರೇಮ ಕವಿತೆಗಳನ್ನು ಒಳಗೊಂಡಿರುವ ಗೀತಾಂಕುರ ಒಂದು ಒಳ್ಳೆಯ ಕವನ ಸಂಕಲನ ಎಂದು ತಿಳಿಸಿದರು.
ಕೃತಿ ಲೋಕಾರ್ಪಣೆ ಮಾಡಿದ ಶಿಕ್ಷಕ ಶಿವಣ್ಣ ಮಂಗಲ ಮಾತನಾಡಿ, ಕೃತಿಕಾರ ಸಬ್ಬನಹಳ್ಳಿ ಶಶಿಧರ ಅವರು ಸ್ನೇಹ ಜೀವಿ. ತಮ್ಮ ವೈಯಕ್ತಿಕ ಚಟುವಟಿಕೆಗಳಲ್ಲಿ ಸ್ನೇಹಿತರಿಗೇ ಆದ್ಯತೆ ನೀಡುತ್ತಾರೆ. ಹಾಗಾಗಿ ಕೃತಿ ಬಿಡುಗಡೆಯನ್ನು ಸ್ನೇಹಿತರ ಸಮ್ಮುಖದಲ್ಲಿ ಆಯೋಜಿಸಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರು ಯಾವುದಾದರೂ ಒಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಆಳವಾದ ಅಧ್ಯಯನದೊಂದಿಗೆ ಉತ್ತಮ ಕೊಡುಗೆ ನೀಡಬಹುದು ಎಂದು ಸಲಹೆ ನೀಡಿದರು.
ಲೇಖಕಿ, ಶಿಕ್ಷಕಿ ಡಾ. ಕನ್ನಿಕಾ ಶಿಲ್ಪ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನನ್ನ ಸಾಹಿತ್ಯದ ಓದು, ಕೃತಿಗಳ ರಚನೆಗೆ ಸದಾ ಹುರಿದುಂಬಿಸುತ್ತಿರುವ ಸಬ್ಬನಹಳ್ಳಿ ಶಶಿಧರ ಅವರೇ ನಾನು 19 ಕೃತಿಗಳನ್ನು ಪ್ರಕಟಿಸಲು ಚೈತನ್ಯ. ನೇರ, ದಿಟ್ಟ, ನಿರಂತರ ಎಂಬಂತಹ ವ್ಯಕ್ತಿತ್ವ ಅವರದ್ದು. ಮಂಡ್ಯ ಜಿಲ್ಲಾ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜಾಸತ್ಯ ಪತ್ರಿಕೆ ಸಂಪಾದಕ ಚಂದ್ರಶೇಖರ ದ.ಕೋ.ಹಳ್ಳಿ ಮಾತನಾಡಿ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿ ರಚಿಸಿರುವ ಬಹುಮುಖ ಪ್ರತಿಭೆ ಸಬ್ಬನಹಳ್ಳಿ ಶಶಿಧರ ಅವರು ತಮ್ಮ ಕಾರ್ಯಸ್ಥಾನದಲ್ಲಿ, ಅದರಲ್ಲೂ ಗ್ರಾಮೀಣ ಪರಿಸರದಲ್ಲಿ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯಾರ್ಹ. ಈ ನಿಟ್ಟಿನಲ್ಲಿ ಲೇಖಕರು, ಸಾಹಿತಿಗಳು, ಉಪನ್ಯಾಸಕರು ಹಾಗೂ ಸಾಧಕರನ್ನು ಕರೆಯಿಸಿ ತಮ್ಮ ಕೃತಿಯ ಮೂಲಕ ಜ್ಞಾನ ದಾಸೋಹ ನಡೆಸುತ್ತಿರುವುದು ಮಾದರಿಯಾದುದ್ದು ಎಂದು ಶ್ಲಾಘಿಸಿದರು.
ಉಪನ್ಯಾಸಕ ಮಂಚಶೆಟ್ಟಿ ಎಂ. ಅವರು ಕೃತಿ ಕುರಿತು ಮಾತನಾಡಿ, ಕವಿ ಮಿತ್ರ ಸಬ್ಬನಹಳ್ಳಿ ಶಶಿಧರ ಅವರು ತಮ್ಮ ಕವನಸಂಕಲನದಲ್ಲಿ ಮಹಾಕಾವ್ಯಗಳನ್ನೂ ಪ್ರಶ್ನಿಸುವಂತಹ ಕವನಗಳನ್ನು ರಚಿಸಿದ್ದಾರೆ. ತಮ್ಮ ಎಲ್ಲ ಕವನಗಳಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವರು ಎಂದು ಹೇಳುತ್ತಾ ಸಾಹಿತ್ಯದ ಸಹವಾಸದ ಅನುಕೂಲಗಳನ್ನು ಹಲವು ಉದಾಹರಣೆಗಳ ಸಹಿತ ಕಟ್ಟಿಕೊಟ್ಟರು.
ಹಿಂದಿ ಶಿಕ್ಷಕ ಪ್ರಸನ್ನ ಮಾತನಾಡಿದರು. ಕವಿಯತ್ರಿ ರೇಖಾ ಶಶಿಧರ, ಕುಮಾರ ಸಬ್ಬನಹಳ್ಳಿ, ಸುತ್ತಮುತ್ತಲ ಗ್ರಾಮಗಳ ಕಾವ್ಯಾಸಕ್ತರು ಭಾಗವಹಿಸಿದ್ದರು. ಕವಿ ಸದ್ದಾಂ ತಗ್ಗಹಳ್ಳಿ ಕಾರ್ಯಕ್ರಮ ನಿರೂಪಿಸಿದರು.