ಈ ಬಾರಿ ಗೆಲ್ಲುವ ವಿಶ್ವಾಸ ನೂರಕ್ಕೆ ನೂರರಷ್ಟು: ಲಕ್ಷ್ಮಣ್
ಸಂಜೆವಾಣಿ ನ್ಯೂಸ್
ಮೈಸೂರು.ಏ.28:- ಮತದಾರರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ ಎಂಬ ವಿಶ್ವಾಸ ಇದೆ. ಈ ಬಾರಿ ಶೇ 100 ಗೆಲುವಿನ ವಿಶ್ವಾಸ ಇದೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಹೇಳಿದರು.
ಮೈಸೂರು ನಗರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಕೊಡಗು ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. 21ಲಕ್ಷ ಮತದಾರರ ಪೈಕಿ 14.15 ಲಕ್ಷ ಮತದಾರರು ಮತದಾನ ಮಾಡಿದ್ದಾರೆ. ಇಷ್ಟು ಬಿಸಿಲಿದ್ದರೂ ಕೂಡ ಹೆಚ್ಚಿನ ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ. ಇದರ ಜೊತೆಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು ಭದ್ರತಾ ಸಿಬ್ಬಂದಿಗಳಿಗೂ ಧನ್ಯವಾದಗಳನ್ನ ತಿಳಿಸುತ್ತೇನೆಂದರು.
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದರೂ ನನ್ನ ಗುರ್ತಿಸಿ ನಮ್ಮ ಪಕ್ಷದ ವರಿಷ್ಠರು ನನಗೆ ಟಿಕೇಟ್ ಕೊಟ್ಟರು. ಇದಕ್ಕೆ ನಾನು ಆಭಾರಿಯಾಗಿದ್ದೇನೆ. ವಿಶೇಷವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಉಪಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ನಾನು ಸಾಯುವವರೆಗೂ ಇಂತಹದೊಂದು ಅವಕಾಶವನ್ನು ಕೊಟ್ಟಿದ್ದನ್ನು ಸ್ಮರಿಸಿಕೊಳ್ಳುತ್ತೇನೆಂದರು.
ನಮಗೇನು ರಿಲ್ಯಾಕ್ಸ್ ಮೂಡು ಅಂತೇನು ಇಲ್ಲ. ಎರಡು ದಿನ ಕುಟುಂಬದ ಜತೆ ಹೊರಗಡೆ ಹೋಗಿ ಬರುತ್ತೇನೆ. ಅನಂತರ ಉಳಿದ ಚುನಾವಣಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯವರು ಸಾಕಷ್ಟು ಸರ್ಕಸ್ ಮಾಡಿದರು.
ಹಾಲಿ ಸಂಸದರನ್ನು ಹೊರದಬ್ಬಿ, ಚುನಾವಣೆಗೆ ನಿರಾಸಕ್ತಿ ತೋರಿದ್ದ ಯದುವೀರ್ ಅವರನ್ನ ಕಣಕ್ಕಿಳಿಸಿದರು. ಯದುವೀರ್ ಬಹುಶಃ ಬಿಜೆಪಿ ಸದಸ್ಯತ್ವ ಕೂಡ ಆಗಿರಲಿಲ್ಲ. ಈಗ ಕೊಟ್ಟಿರಬಹುದು. ಅಂತವರನ್ನು ತಂದು ನಿಲ್ಲಿಸಿದರು. ಬಹಳ ಅದ್ಬುತವಾಗಿ ಚುನಾವಣೆ ನಡೆದಿದೆ. ನಾವು ಯಾರಿಗೂ ಕಿಂಚಿತ್ತು ಚ್ಯುತಿ ಬಾರದಂತೆ ನಡೆದುಕೊಂಡಿದ್ದೇವೆಂದರು.
ಬಿಜೆಪಿಯವರು ಮೈಸೂರಲ್ಲಿ ಬೃಹತ್ ಸಮಾವೇಶ ಮಾಡಿದರೂ ಪ್ರಧಾನಿ ನರೇಂದ್ರಮೋದಿ ಅವರು ಮೈಸೂರಿಗೆ ಆಗಮಿಸಿ 47 ನಿಮಿಷ ಮಾತನಾಡಿದರು. ಇದರಲ್ಲಿ 37 ನಿಮಿಷ ಕಾಂಗ್ರೆಸ್ ಟೀಕಿಸಿದ್ದಾರೆಯೇ ಹೊರತು 10 ವರ್ಷ ಎನೂ ಕೊಟ್ಟಿದ್ದೇವೆ. ದೇಶಕ್ಕೆ ಹಾಗೂ ಮೈಸೂರಿಗೆ ತಮ್ಮ ಕೊಡುಗೆ ಎನೆಂಬುದನ್ನು ಹೇಳಿಲ್ಲ. ಕಾಂಗ್ರೆಸ್ ನ್ನು ಸಾಕಷ್ಟು ಟೀಕೆ ಮಾಡಿದ್ದಾರೆ. ಇಷ್ಟೇ ಅವರ ಸಾಧನೆ ಎಂದು ಹೇಳಿದರು.
ಎಲ್ಲರೂ ನನ್ನ ಪರವಾಗಿ ಮತ ಹಾಕಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತರು ನಮ್ಮ ಪರ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಅವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಎಂಟು ಕ್ಷೇತ್ರದಲ್ಲಿ ಐದು ಹಾಲಿ ಹಾಗೂ 3 ಮಾಜಿ ಶಾಸಕರು ನನ್ನ ಪರವಾಗಿ ದುಡಿದಿದ್ದಾರೆ. 20 ಬ್ಲಾಕ್ ಅಧ್ಯಕ್ಷರು, 72 ಮಂಚೂಣೆ ಘಟಕದ ಅಧ್ಯಕ್ಷರೆಲ್ಲರೂ ನನ್ನ ಪರವಾಗಿ ದುಡಿದಿದ್ದಾರೆ. ಅವರೆಲ್ಲರಿಗೂ ಅಭಿನಂದಿಸುತ್ತೇನೆಂದರು.
ನುಡಿದಂತೆ ನಡೆಯುವೆ: ಇನ್ನೂ ಕಾಂಗ್ರೆಸ್ ಪಂಚ ಗ್ಯಾರಂಟಿ ಹಾಗೂ ಸಿದ್ದರಾಮಯ್ಯ ನವರು ಜಿಲ್ಲೆಗೆ ಈ ಆರು ತಿಂಗಳಲ್ಲಿ ನೀಡಿರುವ 450 ಕೋಟಿ ರೂ. ಅನುದಾನದ ಬಗ್ಗೆ ಜನತೆಗೆ ತಿಳಿಸಿ ಮತ ಕೇಳಿದ್ದೇವೆ. ಪ್ರತಿಯೊಬ್ಬ ಕಾರ್ಯಕರ್ತರು ಮತದಾರರಿಗೆ ಗ್ಯಾರಂಟಿ ಕಾರ್ಡ್ ಅನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಕ್ಷೇತ್ರಕ್ಕೆ ಎನೂ ಮಾಡುತ್ತೇನೆಂಬುದನ್ನು ಪ್ರಣಾಳಿಕೆ ನೀಡಿದ್ದೇನೆ. ಮೈಸೂರು ಕೊಡಗಿನಲ್ಲಿ ಕಚೇರಿ ತೆರೆದು ಸ್ಥಳೀಯ ಶಾಸಕರ ಸಹಕಾರದೊಂದಿಗೆ 15 ದಿನ ಮೈಸೂರು, 15 ದಿನ ಕೊಡಗಿನಲ್ಲಿ ಜನರ ಸಮಸ್ಯೆ ಆಲಿಸುತ್ತೇನೆ. ನಿನ್ನೆ ಆರು ಕ್ಷೇತ್ರದಲ್ಲಿ 67ಕ್ಕೂ ಹೆಚ್ಚಿನ ಬೂತ್ ಗೆ ಭೇಟಿ ನೀಡಿದ್ದು, ಅಲ್ಲಿ ಜನತೆ ಕಾಂಗ್ರೆಸ್ ಪರವಾಗಿ ಮತ ಹಾಕಿದ ವಾತಾವರಣ ಕಂಡಿದ್ದು, ನೂರಕ್ಕೆ ನೂರು ನನ್ನ ಗೆಲುವು ನಿಶ್ಚಿತ ಎಂದರು.
ಮಾಜಿ ಸಂಸದರು ಕಳೆದ 25 ದಿನಗಳಿಂದ ನಾಪತ್ತೆಯಾಗಿದ್ದಾರೆ. ಫಲಿತಾಂಶದ ಬಳಿಕ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುತ್ತೇನೆ. ನನ್ನನ್ನು ಟೀಕಿಸಿದ್ದು, ಸುಳ್ಳು ಹೇಳಿದ್ದೆ ಅವರ ಸಾಧನೆಯಾಗಿದೆ. ಒಕ್ಕಲಿಗನೇ ಅಲ್ಲ ಎಂದರೂ ಆದರೆ, ಹಾಲಿ ಶಾಸಕ ಹರೀಶ್ ಗೌಡ ನನ್ನ ಸಂಬಂಧಿ ಇದ್ದಾರೆ. ಹೊಸುಂಡಿ, ಕೆಜಿ ಕೊಪ್ಪಲಲ್ಲಿ ನನ್ನ ಬಳಗವಿದ್ದು, ವಿಚಾರಿಸಿ ಕೇಳಿಕೊಳ್ಳಿ. ಎರಡು ಬಾರಿ ಒಕ್ಕಲಿಗರ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ನಾಲ್ಕು ಮತಗಳ ಅಂತರದಿಂದ ಸೋತಿದ್ದೇನೆ. ಒಕ್ಕಲಿಗ ಸಂಘ ಸೇರಿ ದಲಿತ, ಮುಸ್ಲಿಂ, ಲಿಂಗಾಯತ, ಬ್ರಾಹ್ಮಣ ಸೇರಿ ಎಲ್ಲಾ ಸಮುದಾಯದವರು ನನಗೆ ಮತ ನೀಡಿದ್ದು, ಅವರೆಲ್ಲರ ಪರವಾಗಿ ಮುಂದೆ ದುಡಿಯುತ್ತೇನೆಂದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಜಿಲ್ಲಾ ಮಾದ್ಯಮ ವಕ್ತಾರ ಕೆ.ಮಹೇಶ್, ಒಬಿಸಿ ಘಟಕದ ಅಧ್ಯಕ್ಷ ಕೆ.ನಾಗೇಶ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.