ರಾಷ್ಟ್ರದ ಅಭಿವೃದ್ಧಿಯಲ್ಲಿ ಪಶುವೈದ್ಯಕೀಯ ಕ್ಷೇತ್ರದ ಪಾತ್ರ ಅನನ್ಯ
ಕಲಬುರಗಿ:ಏ.27: ಮೂಕ ಪ್ರಾಣಿಗಳ ಆರೋಗ್ಯವನ್ನು ಕಾಪಾಡುವ ಪಶುವೈದ್ಯಕೀಯ ಕ್ಷೇತ್ರದ ಪತ್ರ ಅನನ್ಯವಾಗಿದೆ. ಪಶುವೈದ್ಯರು ಪ್ರಾಣಿಗಳ ಆರೋಗ್ಯ ಕಾಪಾಡುವುದರ ಜೊತೆಗೆ ಪರಿಸರ ಸಂರಕ್ಷಣೆ, ಆಹಾರ ಭದ್ರತೆ, ಗ್ರಾಮೀಣಾಭಿವೃದ್ಧಿಗಳಲ್ಲಿ ಭಾಗವಹಿಸಿ ಸೇವೆ ನೀಡುತ್ತಾರೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ರಾಷ್ಟ್ರೀಯ ಪಶುವೈದ್ಯಕೀಯ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಶುವೈದ್ಯರು ಹುಚ್ಚುನಾಯಿ ರೋಗ, ಇಲಿಜ್ವರ, ನೆರಡಿರೋಗ, ಪ್ಲೇಗ್ ಸೇರಿದಂತೆ ಮುಂತಾದ ಸಂಭವನೀಯ ಪ್ರಾಣಿಜನ್ಯ ರೋಗಗಳನ್ನು ಪತ್ತೆಹಚ್ಚಿ ಸಮುದಾಯಕ್ಕೆ ಬರದಂತೆ ತಡೆಯುತ್ತಾರೆ. ಪರಿಸರದ ಆರೋಗ್ಯ ಕಾಪಾಡುವುದು, ಪ್ರಾಣಿಗಳ ಆಮದು ಮತ್ತು ರಫ್ತು, ಪ್ರಾಣಿ ಕಲ್ಯಾಣ ಚಟುವಟಿಕೆಗಳು, ವಿಪತ್ತು ನಿರ್ವಹಣೆಯ ಸೇವೆ ಮಾಡುತ್ತಾರೆ. ಕೋಳಿ ಮೌಂಸ ಮತ್ತು ಹಾಲಿನ ಉತ್ಪನ್ನಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಜಾನುವಾರು ಉತ್ಪನ್ನಗಳಿಂದ ರೋಗಗಳನ್ನು ಹರಡದಂತೆ ತೆಡಯುವಲ್ಲಿ ಪಶುವೈದ್ಯರ ಸೇವೆ ಅನನ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಿಬ್ಬಂದಿ ನಿಲೊಫರ್ ಶೇಖ್, ಪೂಜಾ ಜಮಾದಾರ, ಸೋಹೆಲ್ ಶೇಖ್ ಸೇರಿದಂತೆ ಇನ್ನಿತರರಿದ್ದರು.