ಅಕ್ಕಮಹಾದೇವಿಯವರ ವಚನಗಳು ಸ್ತ್ರೀ ಕುಲಕ್ಕೆ ದಾರಿದೀಪವಾಗಿದೆ: ನಿಜಗುಣಾನಂದ ಮಹಾಸ್ವಾಮೀಜಿ
ಬಸವಕಲ್ಯಾಣ:ಏ.27: ಇಲ್ಲಿನ ಬಂದವರ ಓಣಿಯಲ್ಲಿಯಲ್ಲಿ ಅಕ್ಕಮಹಾದೇವಿ ಗವಿಯಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ಹಾಗೂ ಬಸವಕಲ್ಯಾಣಕ್ಷೇತ್ರ ಸಮಿತಿಯಿಂದ ವೀರವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ನಿಮಿತ್ತ ಮಂಗಳವಾರ ಆಯೋಜಿಸಲಾಗಿದ್ದ ಮಹಿಳಾ ಸಮ್ಮೇಳನ ಆಯೋಜಿಸಲಾಗಿತ್ತು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತೋಂಟದಾರ್ಯ ಮಠ ಮುಂಡರಗಿ ಹಾಗೂ ಬೈಲೂರಿನ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಯವರು ವೈರಾಗ್ಯ ನಿಧಿ ಅಕ್ಕಮಹಾದೇವಿ ಜಗತ್ತಿನ ಮೊಟ್ಟಮೊದಲ ಸ್ತ್ರೀವಾದಿ. ಅವರ ವಚನಗಳು ಸ್ತ್ರೀ ಕುಲಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಅಲ್ಲದೆ ಮಹಿಳೆ ಭೋಗದ ವಸ್ತುವಲ್ಲ, ಅವಳಲ್ಲಿ ಅದ್ಬುತ ಶಕ್ತಿಯಿದೆ. ನಮ್ಮದು ಶರಣ ಧರ್ಮವಾಗಿದೆ. ಎಲ್ಲರೂ ಸುಖ ಸಂಪತ್ತು ಅರಸುತ್ತ ಹೋಗುತ್ತೇವೆ. ಆದರೆ ಇದನ್ನು ಧಿಕ್ಕರಿಸಿದ ವೈರಾಗ್ಯದ ತವನಿಧಿ ಅಕ್ಕಮಹಾದೇವಿ ಅವರು ಆಧ್ಯಾತ್ಮದ ಕಡೆ ಬಂದರು. ದೇವರು, ಧರ್ಮ, ಹೆಣ್ಣು-ಗಂಡು, ಪ್ರಕೃತಿ ನಾನು ಹಾಗೂ ಜೀವನದ ಸ್ಪಷ್ಟಿಕರಣ ನೀಡಿದವರು ಅಕ್ಕ. ಮಹಿಳೆಯರು ಮೂಢನಂಬಿಕೆಯಿಂದ ಹೊರಬಂದು ಬದಲಾದರೆ ಸಮಾಜ ಬದಲಾಗುತ್ತದೆ ಎಂದರು.
ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕøತ ಡಾ. ಮೀನಾಕ್ಷಿ ಬಾಳಿ ಮುಖ್ಯ ಅನುಭಾವ ನೀಡಿ, ಮಹಿಳೆಯರು ಪರುಷರಿಗಿಂತ ಕಡಿಮೆಯಲ್ಲ. ಸಮಾನರು ಎಂದು ಹೇಳಿದ್ದು ಲಿಂಗಾಯತ ಧರ್ಮ. ಅಕ್ಕನ ವಚನಗಳು ಅನುಭಾವಕ್ಕೆ ಅನುಭವ ಪರಿಣಾಮಕ್ಕೆ ಪರಿಣಾಮ. ಅವು ಸರ್ವಕಾಲಿಕ ಸತ್ಯವಾಗಿವೆ. ಅವಳ ಅಧ್ಯಾತ್ಮಿಕ ಸಾಧನೆಯ ಹಂಬಲ ಭರಿತ ಭಾವಗಳು ವಚನಗಳಲ್ಲಿ ಕಾಣುತ್ತೇವೆ. ಅಕ್ಕ ಅಧ್ಯಾತ್ಮಿಯಾದರೂ ಸಮಾಜದ ಸಮಸ್ಯೆಗಳ ಚಿಂತನೆ ಬಗ್ಗೆ ಅವಳ ಕಳವಳ ಅನನ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಬಿಡಿಪಿಸಿ ನಿರ್ದೇಶಕಿ ಪ್ರೊ. ವಿಜಯಲಕ್ಷ್ಮಿ ಗಡ್ಡೆ ಮಾತನಾಡಿ, 12ನೇ ಶತಮಾನದಲ್ಲಿ ಮಹಿಳೆಯರು ಮನೆಯ ಹೊರಗಡೆ ಬರುವ ಪರಿಸ್ಥಿತಿ ಇರಲಿಲ್ಲ. ಅಂತಹ ಸಮಯದಲ್ಲಿ ಸ್ರ್ತೀ-ಪುರುಷರು ಸಮಾನರು ಎಂದು ಹೇಳಿ ಕೊಟ್ಟಿದೆ ಶರಣ ಧರ್ಮ. ಮುಂದಿನ ದಿನಗಳಲ್ಲಿ ಗವಿಯಲ್ಲಿ ಅಕ್ಕಮಹಾದೇವಿಯರ ಮೂರ್ತಿ ಕೂಡಿಲಾಸಾಗುವುದು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕ ಮಾತನಾಡಿದರು. ಮಾತೆ ಸುಗುಣತಾಯಿ, ಅಕ್ಕನ ಬಳಗದ ಅಧ್ಯಕ್ಷೆ ಸುಲೋಚನಾ ಮಾಮಾರಂಜನಾದುರ್ಗೆ ಹಾಜರಿದ್ದರು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ ಅವರು ಧ್ವಜಾರೋಹ ನೆರವೇರಿಸಿದರು. ಡಾ. ಸಂಗೀತಾ ಮಂಠಾಳೆ ಸ್ವಾಗತಿಸಿದರೆ ಜಯಶ್ರೀ ಬಿರಾದಾರ ನಿರೂಪಿಸಿದರು. ರಂಜನಾ ಭೂಶೆಟ್ಟಿ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರೆ, ಕವಿತಾ ಸಜ್ಜನ ವಚನ ಪಠಣ ನಡೆಸಿಕೊಟ್ಟರು..
ಇಷ್ಟಲಿಂಗಯೋಗ: ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಸಾನ್ನಿಧ್ಯದಲ್ಲಿ ಪೂಜ್ಯ ಗಾಯತ್ರಿ ತಾಯಿ ನೇತೃತ್ವದಲ್ಲಿ 8 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಸಾಮೂಹಿಕ ಇಷ್ಟಲಿಂಗಯೋಗ ಆಯೋಜಿಸಲಾಗಿತ್ತು.