ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಬೀದಿಬದಿ ಸಭೆ ಮತ್ತು ಮತಯಾಚನೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.27: ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಬಳ್ಳಾರಿ ನಗರದಲ್ಲಿ ಹಲವಾರು ಕಡೆ ಬೀದಿಬದಿ ಸಭೆಗಳನ್ನು ಆಯೋಜಿಸಿ ಜನಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುತ್ತಾ ಪಕ್ಷದ ಅಭ್ಯರ್ಥಿ ಎ. ದೇವದಾಸ್ ಅವರ ಪರವಾಗಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೇಡ್ ಎನ್. ಪ್ರಮೋದ್ “ಹಿಂದಿನ ಹಲವಾರು ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಕೂಡ ಎಲ್ಲಾ ಪಕ್ಷಗಳು ಹಲವಾರು ಭರವಸೆಗಳನ್ನು ಕೊಡುತ್ತಿವೆ. ಹಿಂದಿನ ಚುನಾವಣೆಯಲ್ಲಿ ಮೋದಿಯವರು ಬೆಲೆ ಏರಿಕೆ ಕಡಿಮೆ ಮಾಡುವ, ರೈತರ ಆದಾಯವನ್ನು ದುಪ್ಪಟ್ಟು ಮಾಡುವ , ಎರಡು ಕೋಟಿ ಉದ್ಯೋಗ ನೀಡುವ, ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವ ಭರವಸೆಗಳು ಈಗ ಕೇವಲ ಜುಮ್ಲಾಗಳು ಎಂಬುದು ಜನಗಳಿಗೂ ಅರ್ಥವಾಗದ ವಿಷಯವೇನಲ್ಲ. ಈಗ ಮತ್ತೆ ಈ ಚುನಾವಣೆಯಲ್ಲಿ ಮೋದಿಯವರು ದೇಶದ ಆರ್ಥಿಕತೆಯನ್ನು ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಂದು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ, ವಿಶ್ವಗುರುವನ್ನಾಗಿ ಮತ್ತು ವಿಕಸಿತ ಭಾರತವನ್ನಾಗಿ, ಮಾಡುತ್ತೇವೆ ಎಂಬ ಭರವಸೆಗಳೊಂದಿಗೆ ಜನರ ಮುಂದೆ ಬಂದಿದ್ದಾರೆ. ಇಲ್ಲಿ ಅಭಿವೃದ್ಧಿ ಎಂದರೆ ಜನರ ಅಭಿವೃದ್ಧಿಯೋ ಅಥವಾ ಬಂಡವಾಳಶಾಹಿಗಳ ಅಭಿವೃದ್ಧಿಯೋ ಎಂದು ಜನಗಳು ಪ್ರಶ್ನೆ ಮಾಡಬೇಕಾಗಿದೆ. ಏಕೆಂದರೆ ಕಳೆದ ಹತ್ತು ವರ್ಷಗಳ ಮೋದಿಯವರ ಅಧಿಕಾರದಲ್ಲಿ ಅಂಬಾನಿ, ಅದಾನಿಯವರ ಆಸ್ತಿ ಏರುತ್ತಲೇ ಹೋಯಿತು. ಇನ್ನೊಂದು ಕಡೆ ಬಡ ಜನಗಳ ಜೀವನ ಪಾತಾಳಕ್ಕೆ ಹೋಯಿತು. 2023ರಲ್ಲಿ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪೈಕಿ 111ನೇ ಸ್ಥಾನದಲ್ಲಿದೆ. ನೆರೆಹೊರೆಯ ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಿಗಿಂತ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಇಲ್ಲಿ ಪ್ರತಿದಿನ 20 ಕೋಟಿ ಜನ ಹಸಿದ ಹೊಟ್ಟೆಯಲ್ಲಿ ಮಲಗುತ್ತಾರೆ ಮತ್ತು ಪ್ರತಿ ದಿನ  4,500 ಮಕ್ಕಳು ಅಪೌಷ್ಟಿಕತೆಯಿಂದ ಸಾವಿಗೀಡಾಗುತ್ತಿವೆ. ಇದು ಮೋದಿ ಅವರ ವಿಕಸಿತ ಭಾರತದ ಇನ್ನೊಂದು ಮುಖ!!
ಇಂದಿನ ಭಾರತದ ಈ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಕೂಡ ಸಾಕಷ್ಟು ಇದೆ. ಗರೀಬಿ ಹಠಾವೋ ಎಂಬ ಘೋಷಣೆಯೊಂದಿಗೆ ಜನರನ್ನು ಮರುಳಾಗಿಸಿ ದುಡಿಯುವ ಜನರ ಬೆವರಿನ ಬುನಾದಿಯ ಮೇಲೆ ಟಾಟಾ, ಬಿರ್ಲಾಗಳನ್ನು ಬೆಳೆಸಿದ್ದು ಇದೇ ಕಾಂಗ್ರೆಸ್ ಪಕ್ಷ. ಹಾಗಾಗಿ ಜನತೆ ಇವರು ಕೊಡುವ ಭರವಸೆಗಾಳಿಗೆ ಮತ್ತು ದೊಡ್ಡ ಘೋಷಣೆಗಳಿಗೆ ಬಲಿಯಾಗದೆ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ.
ಇಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷ ಈ ಸತ್ಯವನ್ನು ಜನರ ಮುಂದಿಟ್ಟು ಜನತೆಯನ್ನು ಚುನಾವಣಾ ಭ್ರಮೆಯಿಂದ ಹೊರತಂದು ಹೋರಾಟದ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ. ಈ ಸಂದರ್ಭದಲ್ಲಿ ಚುನಾವಣೆ ಬಂದಿದೆ. ಚುನಾವಣೆಯನ್ನು ಹೋರಾಟದ ಭಾಗವಾಗಿ ಪರಿಗಣಿಸಿರುವ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ ಎ. ದೇವದಾಸ್ ಅವರಿಗೆ ಮತ ನೀಡುವ ಮೂಲಕ ದುಡಿಯುವ ಜನಗಳು ತಮ್ಮ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲು ಅವಕಾಶ ಮಾಡಿಕೊಡಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಡಿ. ನಾಗಲಕ್ಷ್ಮಿ , ಸೋಮಶೇಖರ್ ಗೌಡ, ಎ. ಶಾಂತಾ ಮತ್ತು ಸದಸ್ಯರಾದ ನಾಗರತ್ನ, ಜಗದೀಶ್, ರವಿಕಿರಣ್ ಮುಂತಾದವರು ಉಪಸ್ಥಿತರಿದ್ದರು.