ಬಿಜೆಪಿಯನ್ನು ಸೋಲಿಸುವುದೇ ನಮ್ಮಗುರಿ: ನಾಗೇಂದ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.27: ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ಮನೆಗೆ ಕಳಿಸುವುದೇ ನಮ್ಮ ಗುರಿಯಾಗಿದ್ದು ಕಾಂಗ್ರೆಸ್ ಕಾರ್ಯ ಕರ್ತರೆಲ್ಲಾ ಒಟ್ಟಾಗಿ ಬಂದು ತುಕರಾಂ ಅವರನ್ನು ಗೆಲ್ಲಿಸಿ ರಾಹುಲ್ ಗಾಂಧಿ ಅವರ ಕೈ ಬಲಪಡಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದರು.
ಅವರು ನಿನ್ನೆ ಸಂಜೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ  ಹಮ್ಮಿಕೊಂಡಿದ ಪ್ರಜಾ ಧ್ವನಿ ಎಂಬ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಪರವಾಗಿ ಘೋಷಣೆ ಹಾಕಿದ ಅವರು. ನಮ್ಮ  ಕಾರ್ಯಕರ್ತರ ಅಬ್ಬರದ ಧ್ವನಿ ಬಿಜೆಪಿಯವರಿಗೆ  ಕೇಳಿಸಬೇಕು.  ಈ ಚುನಾವಣೆಯಲ್ಲಿ ನಾವೆಲ್ಲಾ ಸೇರಿ ಬಿಜೆಪಿಗೆ ಬುದ್ದಿ ಕಲಿಸೋಣ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು.
ಸಚಿವರಾದ ಶಿವರಾಜ್ ತಂಗಡಗಿ ಮಾತನಾಡಿ, ಈ ಚುನಾವಣೆ ಸುಳ್ಳಿನ ಬಿಜೆಪಿ, ಸತ್ಯದ ಕಾಂಗ್ರೆಸ್ ನಡುವಿನ ಚುನಾವಣೆಯಾಗಿದೆ. ಬರೀ ಸುಳ್ಳುಗಳನ್ನೇ ಹೇಳಿಕೊಂಡು ಬಂದಿರುವ ಬಿಜೆಪಿಗೆ ದೇಶದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ.  ಬಿಜೆಪಿ ಎಂದೂ ಅಭಿವೃದ್ಧಿ ವಿಚಾರವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದಲ್ಲ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಬಡವರ ಕಲ್ಯಾಣ ಅವರಿಗೆ ಬೇಕಾಗಿಲ್ಲ. ಶ್ರೀಮಂತರ ಕಲ್ಯಾಣಕ್ಕಾಗಿಯೇ ಅವರು ಯೋಚಿಸುತ್ತಾರೆ ಎಂದು ಟೀಕಿಸಿದರು.
ಶ್ರೀರಾಮ ಅವರೊಬ್ಬರಿಗಲ್ಲ,  ನಮ್ಮದು ಅಂಜನಾದ್ರಿ, ನಾವು ಶ್ರೀರಾಮನ ಭಕ್ತರು ಅಂಜನಾದ್ರಿಯನ್ನು ಅಭಿವೃದ್ಧಿ ಪಡಿಸಲು ಬದ್ದರಾಗಿದ್ದೇವೆಂದರು.