ಪಿರಿಯಾಪಟ್ಟಣದಲ್ಲಿ ಶಾಂತಿಯುತ ಶೇ.79.93 ಮತದಾನ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಏ.27:- ತಾಲೂಕಿನಾದ್ಯಂತ ನಡೆದ ಲೋಕಸಭಾ ಚುನಾವಣೆ ಮತದಾನದಲ್ಲಿ ಮತದಾರರು ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಹರ್ಷದಿಂದ ಪಾಲ್ಗೊಂಡು ಸರತಿ ಸಾಲಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ಮೂಲಕ ಶೇ.79.93 ಮತದಾನವಾಗಿ ಎಲ್ಲೆಡೆ ಶಾಂತಿಯುತವಾಗಿ ನಡೆಯಿತು.
ಮತದಾನ ಪ್ರಾರಂಭವಾದ ಬೆಳೆಗ್ಗೆ 7 ಗಂಟೆಯಿಂದ ಮಂದ ಗತಿಯಲ್ಲಿ ಸಾಗಿ ಹೊತ್ತೆರುತ್ತಿದ್ದಂತೆ ಚುರುಕುಗೊಂಡಿತು, ವಯೋವೃದ್ದರು ವಿಕಲಚೇತನರು ಬಿಸಿಲಿನ ಕಾರಣಕ್ಕೆ ಬೆಳಗಿನಿಂದಲೆ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಎಲ್ಲ ಮತ ಕೇಂದ್ರಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆ 9 ಗಂಟೆಯಲ್ಲಿ ಶೇ.10.41 ಮತದಾನವಾಗಿದ್ದರೆ 11 ಗಂಟೆಗೆ ಶೇ. 24.14, ಮಧ್ಯಾಹ್ನ 1 ಗಂಟೆಗೆ ಶೇ. 43.25, 3 ಗಂಟೆಗೆ ಶೇ. 59.5, ಸಂಜೆ 5 ರ ವೇಳೆಗೆ ಶೇ.76.31, 6 ಗಂಟೆ ವೇಳೆ ಶೇ.79.93 ಮತದಾನ ನಡೆಯಿತು, ಒಟ್ಟು 235 ಮತ ಕೇಂದ್ರಗಳಲ್ಲಿ ಕೆಲ ತಾಂತ್ರಿಕ ಸಮಸ್ಯೆಯಿಂದ 3 ಮತ ಕೇಂದ್ರಗಳಲ್ಲಿ ವಿವಿ ಪ್ಯಾಟ್ ಬದಲಿಸಲಾಯಿತು, ಮೊದಲ ಬಾರಿಗೆ ಮತದಾನದಲ್ಲಿ ಪಾಲ್ಗೊಂಡ ಯುವ ಮತದಾರರು ಉತ್ಸಾಹದಿಂದ ಮತಗಟ್ಟೆ ಬಳಿ ಆಗಮಿಸಿ ಮತದಾನ ಮಾಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು, ಈ ವೇಳೆ ಮೊದಲ ಬಾರಿಗೆ ಮತದಾನ ಮಾಡಿದ ಪಟ್ಟಣದ ದಾನಿಯಲ್ ಅಹಮದ್ ಅವರು ಪತ್ರಿಕೆಯೊಂದಿಗೆ ಮಾತನಾಡಿ ಪ್ರತಿಯೊಬ್ಬರು ಮತದಾನದ ಬಗ್ಗೆ ನಿರ್ಲಕ್ಷ ವಹಿಸದೆ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಆಡಳಿತ ನೀಡುವ ವ್ಯಕ್ತಿಯನ್ನು ಆರಿಸಿದಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು ನಮ್ಮ ಮತವನ್ನು ಹಣ ಹಾಗೂ ಇತರೆ ಆಮಿಷಗಳಿಗೆ ಮಾರಿಕೊಳ್ಳದೆ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕು ಎಂದರು.
ಒಟ್ಟಾರೆ ಇತರೆ ಚುನಾವಣೆಗಳಿಗೆ ಹೋಲಿಸಿದರೆ ತಾಲೂಕಿನಾದ್ಯಂತ ಲೋಕಸಭಾ ಚುನಾವಣೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿಯುತವಾಗಿ ನಡೆಯಿತು, ಮತ ಕೇಂದ್ರಗಳ ಬಳಿ ಜೆಡಿಎಸ್ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರನ್ನು ಓಲೈಸುತ್ತಿದ್ದ ದೃಶ್ಯ ಕಂಡುಬಂದಿತು.