ಬೋಸ್ ಗೆಲುವು ಖಚಿತ: ಎಆರ್‍ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ. 27- ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೆಚ್ಚಿನ ಬಹುಮತದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಆಲೂರಿನಲ್ಲಿ ಕುಟುಂಬ ಸಮೇತ ಆಗಮಿಸಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ಬರಲಿದ್ದು, ಚಾ.ನಗರ ಲೋಕಸಭೆ ಸೇರಿದಂತೆ ಒಟ್ಟು 20ಕ್ಕು ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸಾಧಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿ ಅನುಷ್ಠಾನ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಿರುವ 25 ಗ್ಯಾರಂಟಿಗಳ ಪ್ರಣಾಳಿಕೆಗೆ ದೇಶದ ಜನರು ಬೆಂಬಲ ನೀಡಲಿದ್ದಾರೆ ಎಂದು ಅಚಲ ವಿಶ್ವಾಸವಿದೆ ಎಂದರು.
ಸಂವಿಧಾನ ವಿರೋಧಿ ಹೇಳಿಕೆ ಹಾಗೂ ಬಿಜೆಪಿಯ ಸಂವಿಧಾನ ವಿರೋಧಿ ನಡೆಯು ಸಹ ಈ ಬಾರಿಯ ಚುನಾವಣೆಯ ಅಜೆಂಡಾಗಿತ್ತು. ಈ ಸಂವಿಧಾನ ರಕ್ಷಣೆಗಾಗಿ ಮತ ನೀಡಿ ಎಂಬ ನಮ್ಮ ಕಾಂಗ್ರೆಸ್ ಪಕ್ಷದ ಕರೆ ದೇಶದ ಜನರ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರ ಪರಿಪೂರ್ಣವಾಗಿ ಐದು ವರ್ಷಗಳ ಆಡಳಿತವನ್ನು ನಡೆಸಲಿದ್ದು, ಮುಂದಿನ ದಿನಗಳಲ್ಲಿ ಡಬಲ್ ಇಂಜಿನ್ ಸರ್ಕಾರದ ಜೊತೆಗೆ ಕರ್ನಾಟಕ ಹೆಚ್ಚಿನ ಅಭಿವೃದ್ದಿಯಾಗಲಿದೆ ಎಂದು ಕೃಷ್ಣಮೂರ್ತಿ ತಿಳಿಸಿದರು.
ಅನ್ನದಾತ ಮತಗಟ್ಟೆ ನಿರ್ಮಿಸಿ ಹಸಿರು ತೋರಣ: ಅನ್ನದಾತ ಮತಗಟ್ಟೆಯಲ್ಲಿ ವಿಶೇಷವಾಗಿ ಚಪ್ಪರ ಹಾಕಿ, ಹಸಿರು ತೋರಣ, ಬಾಳೆ ಕಂದು, ಕಟ್ಟಿ ಸ್ವಾಗತ ಕೋರಲಾಗಿತ್ತು. ರೈತರ ಫಸಲು, ಬಾಳೆಗೊನೆ, ರೈತರ ಜಮೀನಿನಲ್ಲಿ ಬೆಳೆದಿರುವ ಹೂವಿನಿಂದ ಹಸಿರು ಚಪ್ಪರವನ್ನು ಅಲಂಕಾರ ಮಾಡಲಾಗಿತ್ತು. ರೈತೋಪಕರಣ, ಧಾನ್ಯಗಳ ರಾಶಿ, ಇವುಗಳ ಮೂಲಕ ರೈತರಿಗೆ ಮತಗಟ್ಟೆಯಲ್ಲಿ ಗೌರವ ಕೊಡಲಾಗಿತ್ತು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಆರ್. ಬಾಲರಾಜು, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಮಂಜುಳಾ ಕೃಷ್ಣಮುರ್ತಿ, ಆರ್.ಕೆ. ಶ್ರೀವರ್ಧನ್, ವಿಜಯಲಕ್ಷ್ಮಿ ಬಾಲರಾಜು, ರೋಷಿಣಿ ಆರ್.ಕೆ. ಮುಖಂಡರಾದ ಸಚಿನ್, ಆಲೂರು ಎ.ಎಸ್. ಮಲ್ಲಣ್ಣ, ಮಹದೇವಯ್ಯ, ಬಾಲರಾಜು, ರವಿಕುಮಾರ್, ಹೊಂಗನೂರು ಚೇತನ್, ಗೌಡಹಳ್ಳಿ ರಾಜೇಶ್ ಇತರರು ಇದ್ದರು.