ತಾಳಿ ರಾಜಕೀಯ ಮಾಡಬೇಡಿ, ಅಭಿವೃಧ್ಧಿ ವಿಷಯದ ಮೂಲಕ ಮತ ಕೇಳಿ: ಡಾ. ಅಜಯಸಿಂಗ್ ಆಗ್ರಹ
ಕಲಬುರಗಿ:ಏ.26: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷ ನಿಮ್ಮ ಮಂಗಳ ಸೂತ್ರವನ್ನೂ ಬಿಡೋದಿಲ್ಲ ಎಂದು ಹೇಳಿದ್ದು, ಇದು ಪ್ರಧಾನಿ ಹುದ್ದೆಯಲ್ಲಿದ್ದವರಿಗೆ ಶೋಭೆ ತರುವುದಿಲ್ಲ. ತಾಳಿ ವಿಷಯದಲ್ಲಿ ರಾಜಕೀಯ ಮಾಡದೇ ಅಭಿವೃಧ್ಧಿ ವಿಷಯದ ಮೂಲಕ ಮತಗಳನ್ನು ಬಿಜೆಪಿಯವರು ಕೇಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರ ತ್ಯಾಗ, ಬಲಿದಾನ ದೊಡ್ಡದಿದೆ. ಆ ಕುರಿತು ಗಮನಹರಿಸದೇ ಕಾಂಗ್ರೆಸ್ ಪಕ್ಷವು ಮಂಗಳಸೂತ್ರ ಬಿಡುವುದಿಲ್ಲ ಎಂದು ಟೀಕಿಸಿದರು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಳೆದ 1962ರಲ್ಲಿ ಭಾರತ – ಚೀನಾ ಯುದ್ಧದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರು ಆಭರಣ ದಾನ ಮಾಡಿದ್ದಾರೆ. ಮಂಗಳಸೂತ್ರ ವಿಚಾರದಲ್ಲಿ ರಾಜಕೀಯ ಬೇಡ. ತಾಳಿ ನಮ್ಮ ದೇಶದ ಜನರ ಸಂಸ್ಕøತಿ, ಸಂಪ್ರದಾಯ, ಭಾವನೆಗಳಲ್ಲಿ ಅಡಕವಾಗಿರುವ ಪವಿತ್ರ ವಸ್ತುವಾಗಿದೆ. ಇಂತಹ ತಾಳಿಯ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಅವರ ಹತಾಶವನ್ನು ತೋರಿಸುತ್ತದೆ ಎಂದು ಮೋದಿ ಹಾಗೂ ಬಿಜೆಪಿಗರ ವಿರುದ್ಧ ಅವರು ಹರಿಹಾಯ್ದರು.
10 ವರ್ಷದ ಸುದೀರ್ಘ ಆಡಳಿತ ಮಾಡಿಯೂ ಒಂದೇ ಒಂದು ತನ್ನ ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಮೋದಿಯವರಿಗೆ ನಮ್ಮ ದೇಶದ, ರಾಜ್ಯದ, ಜಿಲ್ಲೆಯ ಮಹಿಳೆಯರೇ ಪ್ರಧಾನಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ್ ಗುತ್ತೇದಾರ್, ಮುಖಂಡರಾದ ನೀಲಕಂಠ್ ಮೂಲಗೆ, ಶರಣು ಭೂಸನೂರ್, ಮಾಜಿದ್ ಗಿರಣಿ, ವಿಜಯ್ ಕೇದಾರಲಿಂಗಯ್ಯ, ಉದಯ್ ಪಾಟೀಲ್, ರಾಜಗೋಪಾಲರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.