ಮದುವೆ ಮನೆಯಲ್ಲಿ ಮತದಾನ ಜಾಗೃತಿ
ಔರಾದ್ :ಏ.26: ತಾಲೂಕಿನ ಸಂತಪೂರ ಭಾರತ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಮದುವೆ ಸಮಾರಂಭವು ಮತದಾನ ಜಾಗೃತಿ ಮೂಡಿಸುವಲ್ಲಿಯೂ ಯಶಸ್ವಿಯಾಗಿ ವಿಶೇಷ ಎನಿಸಿತು. ಮೇ. 7ರಂದು ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾನ ಮಹತ್ವದ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂಥದೊಂದು ಅಪರೂಪದ ಪ್ರಯತ್ನ ನಡೆಯಿತು.
ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿ, ಮೇ. 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಶೇ. 100ರಷ್ಟು ಮತದಾನವಾಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುವಂತಾಗಬೇಕು ಎಂದರು. ಜುಮ್ಮಾ-ವಲ್ಲೇಪೂರೆ ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ, ವಿದ್ಯಾರ್ಥಿಗಳಿಗೆ ಸತ್ಕಾರ ಹಾಗೂ ವಚನ ಸಂಜೀವಿನಿ ಗ್ರಂಥ ಬಿಡುಗಡೆ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾಲ್ಕಿಯ ಗುರುಬಸವ ಪಟ್ಟದ್ದೇವರು ಮಾತನಾಡಿದರು, ಡಾ. ಮಹಾದೇವಮ್ಮ ತಾಯಿ, ಮಹಾಲಿಂಗ ದೇವರು, ಮೈತ್ರಾದೇವಿ ತಾಯಿ, ಶಂಕರಲಿಂಗ ಸ್ವಾಮಿಗಳು, ಶಿವಾನಂದ ಸ್ವಾಮಿಗಳು, ಬಸವಲಿಂಗ ದೇವರು, ಶಿವಶರಣಪ್ಪ ವಲ್ಲೇಪೂರೆ, ಸಂಜೀವಕುಮಾರ ಜುಮ್ಮಾ, ಡಾ. ಜಗನ್ನಾಥ ಹೆಬ್ಬಾಳೆ, ತಾಪಂ ಇಒ ಶಿವಕುಮಾರ ಘಾಟೆ, ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪ್ರಾಂಶುಪಾಲ ನವಿಲಕುಮಾರ ಉತ್ಕಾರ್, ಸಿದ್ದಪ್ಪ ಮೂಲಗೆ ಸೇರಿದಂತೆ ವಲ್ಲೇಪೂರ-ಜುಮ್ಮಾ ಪರಿವಾರದ ಸಂಬಂಧಿಕರು ಪಾಲ್ಗೊಂಡಿದ್ದರು.
ವಚನ ಸಂಜೀವಿನಿ ಗ್ರಂಥ ಬಿಡುಗಡೆ
ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಜ್ಯೋತಿ ಉಂಗುರಶೆಟ್ಟಿ, ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪೂಜಾ ವಿಠ್ಠಲ್ ರಡ್ಡಿ, ನಂದಿನಿ ಜಗನ್ನಾಥ, ಅಂಜಲಿ ರಾಜಕುಮಾರ ಅವರಿಗೆ ಪ್ರಮಾಣಪತ್ರ ನೀಡುವ ಮೂಲಕ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸತ್ಕರಿಸಿದರು. ಈ ವೇಳೆ ನಾಡೋಜ ಪಟ್ಟದ್ದೇವರು ರಚಿಸಿದ ವಚನ ಸಂಜೀವಿನಿ ಗ್ರಂಥ ಬಿಡುಗಡೆ ಮಾಡಲಾಯಿತು.