ಮೈತ್ರಿ ಅಭ್ಯರ್ಥಿಗೆ ಮತ ನೀಡಿ
(ಸಂಜೆವಾಣಿ ವಾರ್ತೆ)
ರಾಯಚೂರು,ಏ.೨೬- ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ ನೀಡಬೇಕು ಎಂದು ಜನತಾದಳ ಪರಿಶಿಷ್ಟ ಪಂಗಡ ವಿಭಾಗ ರಾಜ್ಯ ಉಪಾಧ್ಯಕ್ಷ ಮತ್ತು ರಾಯಚೂರು ಗ್ರಾಮಾಂತರ ಉಸ್ತುವಾರಿ ಕೆ. ಸಣ್ಣ ನರಸಿಂಹ ನಾಯಕ ಮನವಿ ಮಾಡಿದರು.
ಅವರಿಂದು ನಗರದ ಪತ್ರಿಕಾ ಭವದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಯಚೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ವ್ಯಾಪ್ತಿಯ ನಾಯಕರನ್ನು ಕಡೆಗಣಿಸಿ ಅನ್ಯ ಜಿಲ್ಲೆಯವರಿಗೆ ಟಿಕೆಟ್ ನೀಡಿ ಕ್ಷೇತ್ರದ ವಾಲ್ಮೀಕಿ ನಾಯಕ ಸಮಾಜ ಗೌರವವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಅನ್ಯ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಾಲ್ಮೀಕಿ ನಾಯಕ ಶಕ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ತೋರಿಸಬೇಕು ಎಂದ ಅವರು, ರಾಜಾ ಅಮರೇಶ್ವರ ನಾಯಕ ಅವರು ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಸ್ಥಳೀಯ ವಾಲ್ಮೀಕಿ ನಾಯಕ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ ನೀಡಬೇಕು ಎಂದು ಸಮಾಜದ ಮುಖಂಡರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಂಪಯ್ಯ ನಾಯಕ, ಮಾಲದೊಡ್ಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.