ಶೇ.೧೦೦ ಮತದಾನಕ್ಕೆ ಜನರ ಸಹಕಾರ ಅಗತ್ಯ
ದೇವದುರ್ಗ.ಏ.೨೬- ಲೋಕಸಭೆ ಚುನಾವಣೆಯಲ್ಲಿ ಶೇ.೧೦೦ ಮತದಾನ ಗುರಿಸಾಧನೆ ಮಾಡುವ ಪ್ಲಾನ್ ಹಾಕಿಕೊಳ್ಳಲಾಗಿದ್ದು ಇದಕ್ಕೆ ಮತದಾರರ ಸಹಕಾರ ಅಗತ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಹೇಳಿದರು.
ತಾಲೂಕಿನ ನಗರಗುಂಡ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಮತದಾನ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ನಮ್ಮ ಜಿಲ್ಲೆ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಮೂರನೇ ಹಂತದಲ್ಲಿ ಅಂದರೆ ಮೇ ೭ರಂದು ಮತದಾನ ನಡೆಯಲಿದೆ.
ಅಂದು ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಸೂಕ್ತ ಅಭ್ಯರ್ಥಿಗೆ ಮತನೀಡಬೇಕು. ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿಯಬಾರದು. ಮತದಾನವೇ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದ್ದು, ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಎಲ್ಲರೂ ಮುಂದಾಗಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಬಹುಮುಖ್ಯವಾಗಿ ಹಿರಿಯ ನಾಗರಿಕರು, ಮಹಿಳೆಯರು, ಗರ್ಭಿಣಿಯರು ವಿಶೇಷ ಕಾಳಜಿವಹಿಸಿ ನೀರು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು ಎಂದರು.
ಪಿಎಚ್‌ಸಿಒ ನಿರ್ಮಲಾ, ಆಶಾ ಕಾರ್ಯಕರ್ತೆಯರಾದ ಗೌರಮ್ಮ, ಸರೋಜಮ್ಮ, ಬಸಮ್ಮ, ನಾಗಮ್ಮ, ಶಿವರಾಜ ಇತರರಿದ್ದರು.