ಶಾವಂತಗೇರಾ: ಹನಿ-ಹನಿ ನೀರಿಗೆ ಶುರುವಾಗಿ ಹಾಹಾಕಾರಕುಡಿವ ನೀರಿಗಾಗಿ ಗ್ರಾ.ಪಂ.ಗೆ ಬೀಗ
ದೇವದುರ್ಗ.ಏ.೨೬- ಸಮೀಪದ ಗಬ್ಬೂರು ಕುಡಿವ ನೀರು ಸರಿಯಾಗಿ ಪೂರೈಕೆ ಮಾಡದ ಕಾರಣ ರೊಚ್ಚಿಗೆದ್ದ ತಾಲೂಕಿನ ಶಾವಂತಗೇರಾ ಗ್ರಾಮದ ಗ್ರಾಮಸ್ಥರು ಅಲ್ಲಿನ ಗ್ರಾಪಂಗೆ ಬೀಗ ಜಡಿದು ಶುಕ್ರವಾರ ದಿಢೀರನೆ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಹಲವು ತಿಂಗಳಿನಿಂದ ಕುಡಿವ ನೀರು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಇದರಿಂದ ಜನ ಜಾನುವಾರುಗಳ ಜೀವಜಲಕ್ಕಾಗಿ ತತ್ತರಿಸುತ್ತಿವೆ. ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಸ್ಪಂದಿಸುತ್ತಿಲ್ಲ. ಗ್ರಾಪಂಗೆ ಹತ್ತು ವರ್ಷಗಳಿಂದ ಚುನಾವಣೆ ನಡೆಯದ ಕಾರಣ ಗ್ರಾಪಂ ಸದಸ್ಯರು ಇಲ್ಲದೆ ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ಎನ್ನುವುದು ದೋಚುತ್ತಿಲ್ಲ. ಗ್ರಾಪಂ ಆಡಳಿತ ಮಂಡಳಿ ಇಲ್ಲದ ಕಾರಣ ಇಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾರಾಯಣಪುರ ಬಲದಂಡೆ ನಾಲೆಗೆ ನೀರು ಬಂದ್ ಮಾಡಿದ ನಂತರ ಹನಿಹನಿ ನೀರಿಗೂ ಪರದಾಡುವಂತಾಗಿದೆ. ಬೋರ್‌ವೆಲ್‌ನಿಂದ ನೀರು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಉಳ್ಳವರು ದುಡ್ಡುಕೊಟ್ಟು ನೀರು ಖರೀಸಿದರೆ ಬಡವರು ಏನು ಮಾಡಬೇಕು?. ಹಲವು ದಿನಗಳಿಂದ ಪಿಡಿಒ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಫೋನ್ ಮಾಡದರೂ ಸ್ವೀಕರಿಸುತ್ತಿಲ್ಲ ಎಂದು ದೂರಿದರು.
ಕೂಡಲೇ ಗ್ರಾಮಕ್ಕೆ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡಬೇಕು. ಅಗತ್ಯ ಇರುವ ಕಡೆ ಹೊಸಬೋರ್‌ವೆಲ್ ಕೊರೆದು ನೀರಿನ ವ್ಯವಸ್ಥೆ ಕಲ್ಪಿಸಬೇಕು. ತುರ್ತಾಗಿ ಟ್ಯಾಂಕರ್‌ಮೂಲಕ ನೀರು ಕೊಡಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರಾದ ಕಾಂತಪ್ಪ ಸ್ವಾಮಿ, ಶೇಖರ ನಾಯಕ, ಸಿದ್ದಲಿಂಗ, ಪಿ.ಚನ್ನಬಸವ, ಬಂದಪ್ಪ, ದೇವೇಂದ್ರಪ್ಪ, ರವಿಕುಮಾರ, ರವಿಕಿರಣ ಇತರರಿದ್ದರು.
ಭೇಟಿ:
ಗ್ರಾಮಸ್ಥರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಪಿಡಿಒ ಶಂಶುದ್ಧೀನ್ ಭೇಟಿನೀಡಿ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು. ಇನ್ನೆರಡು ದಿನಗಳಲ್ಲಿ ಹೊಸಬೋರ್‌ವೆಲ್ ಕೊರೆದು ನೀರು ಪೂರೈಕೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಗ್ರಾಪಂ ಕಚೇರಿ ಬೀಗ ತೆಗೆದರು.