ವಿವಿಧ ಇಲಾಖೆಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೋಸಂಬೆ ಭೇಟಿ
ಭಾಲ್ಕಿ: ಸೆ.21:ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆಯವರು ಶುಕ್ರವಾರ ಪಟ್ಟಣದ ಸೇರಿದಂತೆ ತಾಲೂಕಿನ ನಿಟ್ಟೂರ(ಬಿ), ದಾಡಗಿ, ಕೇರೂರ ಸೇರಿದಂತೆ ವಿವಧ ಶಾಲೆ, ವಸತಿ ನಿಲಯಗಳು, ಗ್ರಾ.ಪಂ. ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಪ್ರಾರಂಭದಲ್ಲಿ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ದಾಖಲಾತಿ, ಸ್ಟಾಕ್ ರಿಜಿಸ್ಟರ್, ಸೇರಿದಂತೆ ವಿವಿಧ ಪರಿಕರಗಳನ್ನು ಪರಿಶೀಲಿಸಿದರು. ಶಾಲೆಯ ಆವರಣದಲ್ಲಿ ಅಸ್ವಚ್ಛತೆ ತಾಂಡವವಾಡಿತ್ತಿರುವ ಬಗ್ಗೆ ವಾರ್ಡನ್ ಮತ್ತು ಪ್ರಾಂಶುಪಾಲರಿಗೆ ತರಾಟೆಗೆ ತೆಗದುಕೊಂಡರು. ವೈಯಕ್ತಿಕವಾಗಿ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು. 70 ವಿದ್ಯಾರ್ಥಿನಿಯರಿಗೆ ಎರಡೇ ಕೋಣೆಗಳಲ್ಲಿ ಮಲಗಲು ಜಾಗ ಇದ್ದಿದ್ದರಿಂದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಮಲಗುವ ಕೋಣೆಯ ಹತ್ತಿರ ಶೌಚಾಲಯದ ವ್ಯವಸ್ಥೆ ಇಲ್ಲ. ಹೀಗಾಗಿ ವಿದ್ಯಾರ್ಥಿನಿಯರು ರಾತ್ರಿಹೊತ್ತು ಶೌಚಾಲಯಕ್ಕಾಗಿ ಪರದಾಡುವ ಬಗ್ಗೆ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ಸಮಸ್ಯೆ ಸರಿಪಡಿಸುವ ಬಗ್ಗೆ ಸೂಚಿಸಿದರು. ನಂತರ ನಿಟ್ಟೂರ(ಬಿ) ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಪರಿಶೀಲಿಸಿದರು. ನಿಟ್ಟೂರ(ಬಿ) ಪ್ರೌಢಶಾಲಾ ಆವರಣದಲ್ಲಿ ಜೆಜೆಎಮ್ ಗುತ್ತಿಗೆದಾರರು ಪೈಪ್‍ಗಳು ಬಿಸಾಡಿದ್ದು ವಿದ್ಯಾರ್ಥಿಗಳಿಗೆ ಆಗುವ ತೊಂದರೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಶಾಲಾ ಆವರಣದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಂತರ ನಿಟ್ಟೂರ(ಬಿ)ಯ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರು. ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ಸರಿಪಡಿಸಲು ಸೂಚಿಸಿದರು. ಅಲ್ಲಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಬಾಣಂತಿಯರ ಸಮಸ್ಯೆಗಳ ಬಗ್ಗೆ ಮತ್ತು ಮಕ್ಕಳ ಪಾಲನೆಯ ಬಗ್ಗೆ ಮಾಹಿತಿ ಕಲೆ ಹಾಕಿದರು. ನಂತರ ದಾಡಗಿ ಗ್ರಾ.ಪಂ. ಗೆ ಭೇಟಿನೀಡಿ ಅಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ನಂತರ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಸ್‍ಜೆಪಿಯು ಸಹಾಯವಾಣಿಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಸಿಡಿಪಿಓ ಶ್ರೀನಿವಾಸ ಬಾಲವಾಲೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸತೀಶಕುಮಾರ ಸಂಗನ್, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರ, ಪ್ರಶಾಂತ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ.ಬಿ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ವಿಜಯಮಾಲಾ ವಗ್ಗೆ, ಸಹದೇವ.ಜಿ, ಸಂತೋಷ ಮುದಾಳೆ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ್ ಮುಂತಾದ ತಾಲೂಕು ಅನುಷ್ಠಾನ ಅಧಿಕಾರಿಗಳು ಹಾಜರಿದ್ದರು.