ಶಿಕ್ಷಕ ಅಜರ ಮುಲ್ಲಾಗೆ ಮಾಜಿ ಶಾಸಕ ಡೊಂಗರಗಾಂವರಿಂದ ಸನ್ಮಾನ
ಅಥಣಿ :ಸೆ.21: ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಜಯಸಿಂಗಪುರದಲ್ಲಿ ಜರುಗಿದ ಎಂ ಜಿ ಪಟೇಲ್ ನ್ಯಾಶನಲ್ ಬೆಸ್ಟ್ ಟೀಚರ್ ಅವಾರ್ಡ್ ಸ್ವೀಕರಿಸಿದ ಸ್ಥಳೀಯ ಉಲ್ಫತ್ ಉರ್ದು ಶಾಲೆಯ ಮುಖ್ಯ ಶಿಕ್ಷಕ ಅಜರ ಮುಲ್ಲಾ ಅವರಿಗೆ ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ತಮ್ಮ ನಿವಾಸಕ್ಕೆ ಬರಮಾಡಿಕೊಂಡು ಗೌರವಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಮಾತನಾಡಿ ಮುಸ್ಲಿಂ ಸಮಾಜದಲ್ಲಿ ಶಿಕ್ಷಣದ ಕೊರತೆಯಿದೆ. ಮುಸ್ಲಿಂ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ದೇಶದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ಇಂದಿನ ದಿನಮಾನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಈ ನಿಟ್ಟಿನಲ್ಲಿ ಮುಸ್ಲಿಂ ಬಾಂಧವರು ತಮ್ಮ ಮಕ್ಕಳಿಗೆ ಹೆಣ್ಣು ಗಂಡು ಎಂಬ ಭೇದ ಭಾವ ಇಲ್ಲದೇ ಸರ್ವರಿಗೂ ಶಿಕ್ಷಣ ಪಡೆಯಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಸನ್ಮಾನ ಸ್ವೀಕರಿಸಿದ ಅಜರ ಮುಲ್ಲಾ ಮಾತನಾಡಿ ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಮಾಜಿ ಶಾಸಕರಾದ ಶಹಾಜಹಾನ ಡೊಂಗರಗಾಂವ ಅವರ ಅಧಿಕಾರ ಅವಧಿಯಲ್ಲಿ ತಾಲೂಕಿನಲ್ಲಿ 5 ಸರ್ಕಾರಿ ಉರ್ದು ಶಾಲೆಗಳು ಮಂಜೂರು ಮಾಡಿ ಪ್ರಾರಂಭಿಸಿದ್ದರು ಹಾಗಾಗಿ ಅಥಣಿ ತಾಲೂಕಿನ ಮುಸ್ಲಿಂ ಬಾಂಧವರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿತ್ತು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮುಸ್ಲಿಂ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದರು
ಈ ವೇಳೆ ನಿವೃತ್ತಿ ಎಎಸ್ ಐ ರಿಯಾಜ ಮುಲ್ಲಾ ರಾಜು ಕಾವೇರಿ. ಯಾಸೀನ್ ಝಾರೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.