ನೌಕರರ ಸಂಘದ ಚುನಾವಣೆಗೆ ಸರ್ಕಾರ ಮಧ್ಯ ಪ್ರವೇಶ ಮಾಡಲು ಒತ್ತಾಯ.
ಸಂಜೆವಾಣಿವಾರ್ತೆ
ಹರಪನಹಳ್ಳಿ, ಸೆ.21: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು, ಜಿಲ್ಲಾ, ರಾಜ್ಯ ಹಂತದಲ್ಲಿ ಸಾರ್ವತ್ರಿಕ ಚುನಾವಣಾ ದಿನಾಂಕಗಳನ್ನು ನಿಗದಿಪಡಿಸುವುದರೊಂದಿಗೆ ನೌಕರರ ಸಂಘದ ಚುನಾವಣಾ ಪ್ರಕ್ರಿಯೆ ಆರಂಭಿಸಿದ್ದು, ಇದರಲ್ಲಿ ಏಕಪಕ್ಷೀಯ ನಡೆಯಾಗಿದ್ದು ಕೂಡಲೇ ಸರ್ಕಾರ ಮದ್ಯ ಪ್ರವೇಶಿಸಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ, ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂಘದ ಚುನಾವಣೆಗಾಗಿ ಈಗಾಗಲೇ ಮತದಾರರ ಕರಡು ಪ್ರತಿಯನ್ನು ಬಿಡುಗಡೆಗೊಳಿಸಿ ಅಕ್ಷೇಪಣೆ ಸಲ್ಲಿಸಲು ಸಂಘದ ಸರ್ವ ಸದಸ್ಯರಿಗೆ ಅವಕಾಶ ನೀಡಿ ನಂತರ ಅಚಿತಿಮ ಮತದಾರರ ಪಟ್ಟಿ ಬಿಡುಗಡೆಗೊಳಿಸುವುದು ನಿಯಮವಾಗಿದೆ, ಆದರೆ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಚುನಾವಣಾ ಪ್ರಕ್ರಿಯೆ ಮೊದಲು ಕೈಗೊಳ್ಳಬೇಕಾದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಂಘವು ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಂಡು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿ, ವೃಂದ ಸಂಘಗಳ ಮೇಲೆ ದಬ್ಬಳಿಕೆ ಮಾಡುತ್ತಾ ವಿವಿಧ ಸಂಘಟನೆಗಳ ನೇತಾರರನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಲೇ ಬಂದಿದ್ದಾರೆ ಎಂದು ದೂರಿದ್ದಾರೆ.
ಎನ್‍ಪಿಎಸ್ ಹೋಗಲಾಡಿಸಲು ಹೋರಾಟ ಮಾಡುತ್ತಿರುವ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ರಾಜ್ಯದ್ಯಕ್ಷ ಶಾಂತರಾಮ್ ಹಾಗೂ ಎನ್‍ಪಿಎಸ್ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಸಚಿವಾಲಯ ನೌಕರರ ನಿಕಟರ್ಪೂಧ್ಯಕ್ಷ ಗುರುಸ್ವಾಮಿಯವರು, ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಹಾಗೂ ಇತರೆ ರಾಜ್ಯ ಹಂತದ ನಾಯಕರನ್ನು ಸಂಘದ ಮತದಾರರ ಪಟ್ಟಿಯಿಂದ ಏಕಪಕ್ಷೀಯವಾಗಿ ತೆಗೆದು ಹಾಕುವುದರ ಮೂಲಕ ಸಂಘದಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ಮುನ್ನುಡಿ ಬರೆದಿದ್ದಾರೆ.
ಆದ್ದರಿಂದ ಸರ್ವಾಧಿಕಾರಿ ಮನಸ್ಥಿತಿಯನ್ನು ಹೊಂದಿರುವ ಷಡಕ್ಷರಿ ಅವರ ಏಕಪಕ್ಷೀಯ ನಡೆಗಳನ್ನು ಹತೋಟಿಗೆ ತರಲು ಸರ್ಕಾರ ಮದ್ಯಪ್ರವೇಶಿಸಬೇಕು ಹಾಗೂ ಪಾರದರ್ಶಕ, ಪ್ರಜಾಸತ್ತಾತ್ಮಕ ಚುನಾವಣೆಗೆ ಅವಕಾಶ ಮಾಡಿಕೊಡಬೇಕೆಂದು ಎನ್‍ಪಿಎಸ್‍ನೌಕರರ ಸಂಘದ ಅಧ್ಯಕ್ಷ ಪಿ.ಅಂಜಿನಪ್ಪ, ಕಾರ್ಯದರ್ಶಿ ಸೊಪ್ಪಿನ ಹನುಮಂತಪ್ಪ, ಖಜಾಂಚಿ ನಾನ್ಯ ಸಾಹೇಬ್, ಸದಸ್ಯರಾದ ಶಾಂತಮ್ಮ, ಮುಸ್ತಾಫ್ ಸಾಹೇಬ್, ನಟರಾಜ.ಕೆ, ಜ್ಯೋತಿ ಎಂ., ರಾಘವೇಂದ್ರ, ಹರೀಶ, ರೇವಣಸಿದ್ದಪ್ಪ, ರುದ್ರೇಶ್, ಶಿವಕುಮಾರ ಸೇರಿದಂತೆ ಇತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.