ಕೊಪ್ಪಳ ವಿ.ವಿಯಲ್ಲಿ ನಾಟಕ ಮತ್ತು ದೃಶ್ಯ ಕಲಾ ಕೋರ್ಸ್ ಆರಂಭ: ಪ್ರೊ. ಬಿ.ಕೆ.ರವಿ
ಹೊಸಪೇಟೆ (ವಿಜಯನಗರ) ಸೆ.21: ಜನ ಸಾಮಾನ್ಯರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವುದು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಶೈಕ್ಷಣಿಕ ಪ್ರಗತಿಯ ಗುರಿ ಉದ್ಧೇಶಗಳೊಂದಿಗೆ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ 2024-25 ನೇ ಸಾಲಿಗೆ ನಾಟಕ ಮತ್ತು ದೃಶ್ಯ ಕಲಾ ಕೋರ್ಸುಗಳನ್ನು ಆರಂಭಿಸಲಾಗುವುದು ಎಂದು ಕುಲಪತಿಗಳಾದ ಪ್ರೊ. ಬಿ.ಕೆ.ರವಿ ಅವರು ಹೇಳಿದರು.
ಅವರು ಇತ್ತೀಚೆಗೆ ಕರ್ನಾಟಕ ಲಲಿತ ಕಲಾ ಅಕಾಡಮಿಯ ಅಧ್ಯಕ್ಷರಾದ ಪ.ಸ.ಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದರು.
ಕೊಪ್ಪಳ ಕಲಾವಿದರ ನೆಲೆಬೀಡಾಗಿದ್ದು, ಕಿನ್ನಾಳ ಚಿತ್ರಕಲೆಗೆ ಪ್ರಸಿದ್ಧಿ ಪಡೆದಿದೆ ಇಂತಹ ದೇಶಿಯ ಕಲೆಗಳ ಉಳಿವಿಗಾಗಿ ಮತ್ತು ಅಭಿವೃದ್ಧಿಗೆ ಸಾಂಸ್ಕೃತಿಕ ಇಲಾಖೆಗಳು ಶ್ರಮಿಸುತ್ತಿರುವ ಹೊತ್ತಿನಲ್ಲಿ ಉತ್ತರ ಕರ್ನಾಟಕದ ರಂಗಭೂಮಿ ಇಂದು ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಆದ್ದರಿಂದ ಶಿಕ್ಷಣದಲ್ಲಿ ಈ ಕೋರ್ಸ್ಗಳನ್ನು ಆರಂಭಿಸುವ ಮೂಲಕ ಲಲಿತ ಕಲೆಗಳ ಪ್ರಾಮುಖ್ಯತೆಯ ಅರಿವು ಮೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ.ಕುಮಾರ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಕಲೆಗಳಿಗೆ ಮತ್ತು ರಂಗಭೂಮಿ ಬೆಳವಣಿಗೆಗೆ ನಾಟಕ ಮತ್ತು ದೃಶ್ಯ ಕಲಾ ಕೋರ್ಸ್ಗಳ ಆರಂಭಿಸುವ ನಿರ್ಧಾರ ತುಂಬಾ ಔಚಿತ್ಯಪೂರ್ಣವಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಸ.ಕುಮಾರ ಅವರಿಗೆ ಸನ್ಮಾನ ಮಾಡಲಾಯಿತು.
ಸಭೆಯಲ್ಲಿ ಕುಲಸಚಿವರಾದ ಪ್ರೊ.ಕೆ.ವಿ.ಪ್ರಸಾದ್, ನಿರ್ದೇಶಕರಾದ ಪ್ರಕಾಶ ಯಳವಟ್ಟಿ ಹಾಗೂ ಪ್ರವೀಣ್ ಪಾಟೀಲ್ ಇದ್ದರು.