ಮನೆ ಮನೆಗೆ ತೆರಳಿ ಮತದಾನ
ಬ್ಯಾಡಗಿ,ಏ26: ಮೇ ತಿಂಗಳ 7ರಂದು ನಡೆಯುವ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಇದೇ 27ರಿಂದ 29ರವರೆಗೆ ಅಶಕ್ತ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಂದ ಅವರ ಮನೆಗಳಿಗೆ ತೆರಳಿ ಮತದಾನ ಮಾಡಿಸುವ ಪ್ರಕ್ರಿಯೆಗೆ 27ರಂದು ಚಾಲನೆ ನೀಡಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಮಮತಾ ಹೊಸಗೌಡ್ರ ತಿಳಿಸಿದರು.
ಪಟ್ಟಣದ ಸೆಂಟ್ ಜಾನ್ ವಿಯೆನ್ನಾ ಹೈಸ್ಕೂಲಿನಲ್ಲಿ ಗುರುವಾರ ಲೋಕಸಭಾ ಚುನಾವಣೆ 2024 ಹಿನ್ನಲೆಯಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಚುನಾವಣಾ ಮತದಾನ ಕಾರ್ಯಕ್ಕಾಗಿ ಹಂಚಿಕೆ ಮಾಡಲಾಗಿರುವ ಇವಿಎಂ ಮತ್ತು ವಿವಿ ಪ್ಯಾಟಗಳನ್ನು ಮತಗಟ್ಟೆವಾರು ಇವಿಎಂ ಕಮಿಷನೇಟಿಂಗ್ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಆದೇಶದಂತೆ ಇದೇ 27ರಿಂದ 29ರವರೆಗೆ ಕ್ಷೇತ್ರದಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಲು ಅಶಕ್ತರಾದ 85ವರ್ಷ ಮೇಲ್ಪಟ್ಟ ವಯೋವೃದ್ಧರು ಮತ್ತು ವಿಕಲ ಚೇತನರನ್ನು ಗುರುತಿಸಲಾಗಿದ್ದು, ಅಂತವರ ಒಟ್ಟು ಸಂಖ್ಯೆ 202 ಇದ್ದು, ಇಂತವರ ಮನೆ ಮನೆಗೆ ತೆರಳಿ ಅವರಿಂದ ಮತದಾನ ಮಾಡಿಸಲಾಗುವುದು. ಈ ಕಾರ್ಯಕ್ಕೆ ಸೆಕ್ಟರ್ ಅಧಿಕಾರಿ ಒಳಗೊಂಡಂತೆ ಆರು ಜನರ ತಂಡವನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ ಪಟ್ಟರಾಜೇಗೌಡ ಮಾತನಾಡಿ, ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಡಗಿ ತಾಲೂಕಿನ 66 ಗ್ರಾಮಗಳು, ಹಾವೇರಿ ಮತ್ತು ರಾಣೆಬೆನ್ನೂರು ತಾಲೂಕಿನ 51 ಗ್ರಾಮಗಳು ಸೇರಿದಂತೆ ಒಟ್ಟು 117 ಗ್ರಾಮಗಳಲ್ಲಿ 2.12.529 ಮತದಾರರಿದ್ದು, 242 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 302 ಕಂಟ್ರೋಲ್ ಯೂನಿಟ್, 302 ಬ್ಯಾಲೆಟ್ ಯೂನಿಟ್ ಹಾಗೂ 317 ವಿವಿ ಪ್ಯಾಟ್ ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಕ್ಷೇತ್ರದ 242 ಮತಗಟ್ಟೆಗಳಿಗೆ ತಲಾ 60 ಹೆಚ್ಚುವರಿಯಾಗಿ ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್, 75 ವಿವಿ ಪ್ಯಾಟ್ ಮುಂಜಾಗ್ರತೆ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.