ಜನರು ಪುಸ್ತಕ ಓದದಿದ್ದರೆ ಅದರ ನಷ್ಟ ಇಡೀ ಸಮಾಜಕ್ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ: ಏ.26:- ಜನರು ಪುಸ್ತಕ ಓದದಿದ್ದರೆ ಅದರ ನಷ್ಟ ಇಡೀ ಸಮಾಜಕ್ಕೆ ಎಂದು ಭುವನೇಶ್ವರದ ಎ ಎಸ್ ಬಿ ಎಂ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪೆÇ್ರ.ಮಹದೇವ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಂಗವಾಹಿನಿ ಸಂಸ್ಥೆಯ ಸಹಯೋಗದೊಂದಿಗೆ ಕಾಲೇಜಿನ ಕನ್ನಡ ವಿಭಾಗದಿಂದ ಏರ್ಪಡಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮವನ್ನು ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯನ್ನು ಸಾಂಕೇತಿಕವಾಗಿ ಓದುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿನ ನೈತಿಕ ಅಧೋಪತನಕ್ಕೆ, ಮೌಲ್ಯಗಳ ಭ್ರಷ್ಟಗೊಂಡಿರುವುದಕ್ಕೆ ಜನರು ಪುಸ್ತಕ ಓದದೆ ಇರುವುದೇ ಕಾರಣವಾಗಿದೆ. ಗಾಂಧೀಜಿ ನಿರಂತರವಾಗಿ ಪುಸ್ತಕದೊಂದಿಗೆ ಜ್ಞಾನಕ್ಕೆ ತೆರೆದುಕೊಂಡಿದ್ದರಿಂದ ಮಹಾತ್ಮರಾಗಲು ಸಾಧ್ಯವಾಯಿತು. ಕೇಳುವುದರ ಓದುವುದರ ಮೂಲಕ ಜ್ಞಾನಕ್ಕೆ ತೆರೆದುಕೊಳ್ಳಬೇಕು. ಪುಸ್ತಕಗಳು ಮೌಲ್ಯಗಳ ಭಂಡಾರ. ಮಹಾಕವಿಗಳು, ಚಿಂತಕರು, ಮಹಾತ್ಮರು ಸಂವಾದ ಮಾಡಲು ಪುಸ್ತಕದಲ್ಲಿ ನಿಮಗಾಗಿ ಕಾಯುತ್ತಿದ್ದಾರೆ. ಅವರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಗ್ರೀಕರಿಗೂ ಭಾರತೀಯರಿಗೂ ಸಾಂಸ್ಕೃತಿಕವಾಗಿ ಹಲವು ಸಾಮ್ಯತೆಯನ್ನು ಗುರುತಿಸಬಹುದು. ಭಾರತೀಯರಂತೆ ಗ್ರೀಕರು ಕೂಡ ಬಹುದೇವತಾರಾಧನೆಯವರು. ದೇವತೆ ಮತ್ತು ಮನುಷ್ಯ ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಗ್ರೀಕರ ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳು ಭಾರತೀಯರ ಮಹಾಭಾರತ ಮತ್ತು ರಾಮಾಯಣಕ್ಕೆ ಹೋಲಿಸಿ ಹಲವು ಸಾಮ್ಯತೆಯನ್ನು ಗುರುತಿಸಬಹುದು. ಅವರ ಸಂಸ್ಕೃತಿ ನಾಶವಾದರೂ ಅವರು ಪ್ರಾರಂಭಿಸಿದ ಕ್ರೀಡೆಗಳು ಜಗತ್ತಿನಾದ್ಯಂತ ಜೀವಂತವಾಗಿವೆ. ಪುಸ್ತಕಗಳು ಜಗತ್ತನ್ನು ಅರಿಯುವ ಸಾಧನಗಳಾಗಿವೆ. ಮಾನವನ ಕಲ್ಯಾಣಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು.
ಖ್ಯಾತ ಕತೆಗಾರರಾದ ಹನೂರು ಚೆನ್ನಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪುಸ್ತಕಕ್ಕೆ ಎರಡು ಮುಖಗಳಿವೆ. ಒಂದು ಬರೆಯುವುದು ಮತ್ತೊಂದು ಬರೆದಿರುವುದನ್ನು ಓದುವುದು. ಈ ಎರಡು ಪ್ರಕ್ರಿಯೆಗಳು ಸೇರಿ ಪುಸ್ತಕವಾಗಿದೆ. ಲೋಕದ ಜ್ಞಾನವನ್ನು ಪುಸ್ತಕ ರೂಪದಲ್ಲಿ ಓದಿಕೊಂಡು ಅನುಸರಿಸಿ ಸಾಧಕರಾಗಿದ್ದಾರೆ. ಪಠ್ಯ ಓದುವುದಕ್ಕಾಗಿ ಕಾಲೇಜಿಗೆ ಬರಬೇಕು. ಅದಷ್ಟೇ ಶಿಕ್ಷಣವಲ್ಲ. ಪಠ್ಯೇತರವಾಗಿ ಎಷ್ಟು ಪುಸ್ತಕಗಳನ್ನು ಓದಿಕೊಂಡಿದ್ದೇನೆ ಎಂಬುದರ ಮೇಲೆ ನಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಲು ಸಾಧ್ಯವಾಗಿದೆ. ಬರವಣಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪ್ರೇರಣೆ ಸಿಗಬಲ್ಲದು. ನನಗೆ ನನ್ನಪ್ಪ ಅರ್ಜಿಗಳನ್ನು ಬರೆಯುಸುತ್ತಿದ್ದ. ಅನಂತರ ಸಾರ್ವಜನಿಕ ಅರ್ಜಿಗಳನ್ನು ಬರೆಯಲಾರಂಭಿಸಿದರು. ಯಾವುದಾದರೂ ಒಂದು ಘಟನೆಗಳು ನಮ್ಮನ್ನು ನೋವು ನಲಿವು ಸಂಕಟಗಳು ಕಾಡಬೇಕು. ಆಗ ಬರವಣಿಗೆ ಮಾಡಲು ಸಾಧ್ಯ. ಬರೆವಾಣಿಗೆಗೆ ನಮ್ಮ ನಮ್ಮ ಕೇರಿಯಲ್ಲಿ ನಮ್ಮ ಊರುಗಳಲ್ಲಿ ನೂರಾರು ಕಾದಂಬರಿಗಳನ್ನು ಬರೆಯುವಷ್ಟು ಕಥಾ ವಸ್ತುಗಳು ನಮ್ಮ ಕಣ್ಣಮುಂದೆನೇ ಸಿಗುತ್ತವೆ. ಆದರೆ ಅದನ್ನು ನೋಡುವ ಸೂಕ್ಷ್ಮ ಮನಸ್ಸು ನಮ್ಮಲ್ಲಿರಬೇಕು. ಪುಸ್ತಕಗಳು ನಮ್ಮ ಸ್ನೇಹಿತರಾಗಿ ವಿಶ್ವವನ್ನು ಅರಿಯಲು ಸಹಕಾರಿಯಾಗಿವೆ.
ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಬೇಕು. ಪುಸ್ತಕಗಳ ನಿರಂತರ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ.ಎಸ್.ಚಂದ್ರಮ್ಮ ಅವರು ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪೆÇ್ರ.ಎ.ಎಂ.ಶಿವಸ್ವಾಮಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪುಸ್ತಕ ದಿನಾಚರಣೆಯ ಅಂಗವಾಗಿ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಾಪಾಲಕರಾದ ಪೆÇ್ರ.ದೀಪಿಕಾ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ಚಿನ್ಮಯ ಭಟ್, ಪೆÇ್ರ.ಲೋಕೇಶ್, ಪೆÇ್ರ.ಗಣೇಶ್ ಪ್ರಕಾಶ್, ಬಿ.ಗುರುರಾಜು ಯರಗನಹಳ್ಳಿ, ಸುರೇಶ್, ಡಾ.ಎಚ್.ಎಂ.ನಾಗೇಂದ್ರ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಹರ್ಷಿತಾ ಪ್ರಾರ್ಥಿಸಿದರು. ನಾಗಮಣಿ ಸ್ವಾಗತಿಸಿದರು. ತೇಜಸ್ವಿನಿ ವಂದಿಸಿದರೆ ಮಾನಸ ನಿರೂಪಿಸಿದರು.