ಯುಪಿಎಸ್‍ಸಿಯಲ್ಲಿ 492ನೇ ರ್ಯಾಂಕ್ ಪಡೆದ ಸ್ವಾತಿರಾಠೋಡಗೆ ಸನ್ಮಾನ
ಬಸವಕಲ್ಯಾಣ:ಏ.26: ಯುಪಿಎಸ್‍ಸಿಯಲ್ಲಿ 492ನೇ ರ್ಯಾಂಕ್ ಪಡೆದ ತಾಲೂಕಿನ ಚಿಕನಾಗಾಂವ ಬಂಜಾರಾ ತಾಂಡಾದ ನಿವಾಸಿ ಸ್ವಾತಿ ಮೋಹನ ರಾಠೋಡ ಅವರಿಗೆ ಬಂಜಾರಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಸ್ತಾಪೂರ ಬಂಗ್ಲಾ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಜಿಪಂ ಮಾಜಿ ಅಧ್ಯಕ್ಷ ನೀಲಕಂಠ ರಾಠೋಡ ಅವರ ನೇತ್ರತ್ವದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಂಜಾರಾ ಸಮಾಜದ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘ ದವರು ಸಹ ಸ್ವಾತಿ ರಾಠೋಡಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೀಲಕಂಠ ರಾಠೋಡ, ಸ್ವಾತಿ ಮೋಹನ ರಾಠೋಡ ಅವರು ಕಡು ಬಡತನದ ಕುಟುಂಬದಲ್ಲಿ ಬೆಳೆದು ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಪಾಲಕರು ಕಷ್ಟಪಟ್ಟು ಅಭ್ಯಾಸ ಮಾಡಿಸಿದ ಫಲವಾಗಿ ಇಂದು ಮಗಳ ಸಾಧನೆಯನ್ನು ಕಂಡು ಹೆಮ್ಮೆ ಪಡುತ್ತಿದ್ದಾರೆ. ಅಲ್ಲದೆ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ ಅವರು ಶ್ರಮಪಟ್ಟು ದುಡಿದವರಿಗೆ ತಕ್ಕ ಫಲ ದೊರಕುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಸ್ವಾತಿ ಮೋಹನ ರಾಠೋಡ ಮಾತನಾಡಿ, ನಮ್ಮ ಕುಟುಂಬ ಆರ್ಥಿಕವಾಗಿ ಹಿಂದುಳಿದಿತ್ತು. ತಂದೆ ಗೌಂಡಿ ಕೆಲಸ ಹಾಗೂ ತಾಯಿ ತಳ್ಳು ಗಾಡಿಯಲ್ಲಿ ತರ್ಕಾರಿ ಮಾರಿ ಕಷ್ಟಪಟ್ಟು ನನಗೆ ಓದಿಸಿದ್ದಾರೆ. ನಾನು ಸಹ ಸಮಯ ವ್ಯರ್ಥ ಮಾಡದೇ ಶ್ರಮ ವಹಿಸಿ ಓದುವ ಮೂಲಕ ನಿಮ್ಮೆಲ್ಲರ ಆಶಿರ್ವಾದದಿಂದ ಯುಪಿಎಸ್‍ಯಲ್ಲಿ ಪಾಸಾಗಿದ್ದೇನೆ. ನನಗೆ ಪ್ರತಿಫಲ ಸಿಕ್ಕಿದೆ. ನನ್ನಂತೆ ಮುಂದಿನ ಪೀಳಿಗೆಯು ಉತ್ತಮವಾಗಿ ಅಭ್ಯಾಸ ಮಾಡಿ ಉನ್ನತ ಹುದ್ದೆಗಳು ಅಲಂಕರಿಸಲಿ ಎಂದು ಆಶೆಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷೆ ಯಶೋದಾ ರಾಠೋಡ, ಸವಿತಾ ಕಾಂಬಳೆ, ಸೋನಾಲಿ ನಿಲಕಂಠೆ ಬಂಜಾರಾ ಸಮಾಜದ ಪ್ರಮುಖರಾದ ನವನಾಥ ಎ ರಾಠೋಡ, ಡಾ. ಬಾಲಕೃಷ್ಣ ರಾಠೋಡ, ಶಾಂತಕುಮಾರ ರಾಠೋಡ, ಜಯರಾಜ ರಾಠೋಡ, ವಿನೋದ ರಾಠೋಡ, ಅಶೋಕ ಚವ್ಹಾಣ, ರಾಜಕುಮಾರ ನಾಯಕ, ಪ್ರಕಾಶ ಜಾಧವ, ಪ್ರೇಮಸಿಂಗ್ ರಾಠೋಡ, ಶಿವರಾಮ ಚವ್ಹಾಣ, ರಾಜಕುಮಾರ ಜಾಧವ, ನವನಾಥ ರಾಠೋಡ, ಸುನೀಲ ರಾಠೋಡ, ಸುನೀಲ ಜಾಧವ ಸೇರಿದಂತೆ ಸಮಾಜದ ನೂರಾರು ಜನರು ಹಾಜರಿದ್ದರು.