ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸದಿದ್ದರೆ ಹೋರಾಟ
ಬೀದರ್: ಏ.26:ಜಿಲ್ಲೆಯ ಖಾಸಗಿ ಕೈಗಾರಿಕೆ ಹಾಗೂ ಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ 80 ರಷ್ಟು ಮೀಸಲು ಕಲ್ಪಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ಮಹಾದೇವ ಜಾತ್ರಾ ನಿಮಿತ್ತ ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ನಡೆದ ಗಡಿ ಕನ್ನಡೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡಿಗರ ಕಡೆಗಣನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವೇದಿಕೆ ರಾಜ್ಯ ಅಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ಕರ್ನಾಟಕದಾದ್ಯಂತ ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಒತ್ತಾಯಿಸಿ ವೇದಿಕೆ ನಡೆಸಿದ ಹೋರಾಟ ಯಶಸ್ವಿಯಾಗಿದೆ. ಪರಿಣಾಮವಾಗಿ, ಎಲ್ಲೆಡೆ ಕನ್ನಡ ನಾಮಫಲಕಗಳು ರಾರಾಜಿಸುತ್ತಿವೆ ಎಂದು ತಿಳಿಸಿದರು.
ವೇದಿಕೆ ಕನ್ನಡಿಗರ ಹಿತಕ್ಕೆ ಪೂರಕವಾಗಿ ಬರುವ ದಿನಗಳಲ್ಲಿ ಇನ್ನೂ ಅನೇಕ ಹೋರಾಟಗಳನ್ನು ನಡೆಸಲಿದೆ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ ಮಾತನಾಡಿ, ನಾರಾಯಣಗೌಡರ ಮುಂದಾಳತ್ವದಲ್ಲಿ ಕರವೇ ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದೆ. ವೇದಿಕೆಗೆ ರಾಜ್ಯದಾದ್ಯಂತ ಸುಮಾರು 70 ಲಕ್ಷ ಕಾರ್ಯಕರ್ತರಿದ್ದಾರೆ. ಅದರಿಂದಾಗಿಯೇ ವೇದಿಕೆಯ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆ ಹೋರಾಟ ಯಶಸ್ಸು ಕಂಡಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಖಾಸಗಿ ಕೈಗಾರಿಕೆ, ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವುದು ಕನ್ನಡಿಗರ ಹಕ್ಕು. ಇದನ್ನು ಕೊಡಿಸುವ ಸಾಮಥ್ರ್ಯ ನಾರಾಯಣಗೌಡರಿಗೆ ಇದೆ ಎಂದು ತಿಳಿಸಿದರು.
ಕಲಾವಿದ ನಾಗರಾಜ ಜೋಗಿ ಹಾಗೂ ಸಂಗಡಿಗರು ಗಾನ ಸುಧೆ ಹರಿಸಿದರು. ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳನ್ನು ಸುಮಧುರವಾಗಿ ಹಾಡಿ ನೆರೆದವರ ಮನ ರಂಜಿಸಿದರು.
ಮುಧೋಳ(ಬಿ) ಗ್ರಾಮ ಪಂಚಾಯಿತಿಗೆ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಸಂದ ಪ್ರಯುಕ್ತ ಪಿಡಿಒ ದತ್ತಾತ್ರೇಯ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಮನೆಯ ಮಾನ ಅಣ್ಣನ ಪ್ರಾಣ ಸಾಮಾಜಿಕ ನಾಟಕದ ಪಾತ್ರಧಾರಿಗಳನ್ನು ಸತ್ಕರಿಸಿ, ಪ್ರಮಾಣ ಪತ್ರ ವಿತರಿಸಲಾಯಿತು.
ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮಶೇಖರ ಸಜ್ಜನ್ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಹೇಡೆ ನೇತೃತ್ವ ವಹಿಸಿದ್ದರು. ಜಿಲ್ಲಾ ಘಟಕದ ಕಾರ್ಯದರ್ಶಿ ವಿವೇಕ ನಿರಮಳೆ, ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಸಚಿನ್ ತಿಪಶೆಟ್ಟಿ, ಗ್ರಾಮದ ಪ್ರಮುಖರಾದ ಸಂತೋಷ ಗೋದೆಪುರ್ಗೆ, ಮಹಾದೇವ ಲಕ್ಕಶೆಟ್ಟೆ, ಪ್ರದೀಪ್ ಬಿರಾದಾರ, ಮಹಾದೇವ ಬಾವಗೆ, ರಾಜಕುಮಾರ ಹೊಡಗೆ, ಶಿವಕಾಂತ ಖಂಡೆ, ಪರಮೇಶ್ವರ ಮೈಲಾರೆ, ಅನಿಲ್ ಹೊಡಗೆ, ತುಕಾರಾಮ ಧನಗರ, ಹಣಮಂತ ಮುಸ್ತಾಪುರೆ, ಸಂಗಮೇಶ ಇಂದ್ರಾಳೆ, ಸಾಯಿನಾಥ ಘೋಡೆ, ಅಮೃತರಾವ್ ವಾಡೆ, ಗುರುನಾಥ ಹೊಡಗೆ, ಚಂದ್ರಕಾಂತ ಖೇರಬಾ, ಸೋಮನಾಥ ಜೈರಾಮ್ ಮೊದಲಾದವರು ಇದ್ದರು.
ಮುಖಂಡ ಮಹೇಶ ಕಾಪಸೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗನಾಥ ಶಂಖು ನಿರೂಪಿಸಿದರು. ಪರಮೇಶ ಬಾವಗೆ ವಂದಿಸಿದರು.