ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಡಾ.ಕೆ.ಎಸ್.ಗಾಯತ್ರಿ
ಗೌರಿಬಿದನೂರು.ಏ.೨೬- ಆಧುನಿಕ ಬದುಕಿನ ಒತ್ತಡದ ಜೀವನದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಪ್ರಾಂಶುಪಾಲೆ ಡಾ.ಕೆ.ಎಸ್.ಗಾಯತ್ರಿ ತಿಳಿಸಿದರು.
ನಗರದ ಎಇಎಸ್ ನ್ಯಾಷನಲ್ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಮಂಗಳವಾರ ಏರ್ಪಡಿಸಲಾಗಿದ್ದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ವಿಲಿಯಂ ಷೇಕ್ಸ್ ಪೀಯರ್ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕ ಅತ್ಯತ್ತಮ ಗೆಳೆಯನಿದ್ದಂತೆ ಪುಸ್ತಕ ಓದುವುದರಿಂದ ವಿಶ್ವ ಸುತ್ತಿದ ಅನುಭವವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಗೀಳನ್ನು ಕಡಿಮೆ ಮಾಡಿಕೊಂಡು ಮಾನಸಿಕ ಒತ್ತಡದಿಂದ ದೂರಾಗಬೇಕು ಎಂದರು.
ಗ್ರಂಥಪಾಲಕ ಟಿ.ಎನ್.ಜಯರಾಮರೆಡ್ಡಿ ಮಾತನಾಡಿ, ಪುಸ್ತಕಗಳು ಮಾನವ ಸಂಗಾತಿಗಳಾಗಿವೆ. ಪುಸ್ತಕಗಳು ಗತ ವೈಭವ ಮತ್ತು ಮುಂದಿನ ಪೀಳಿಗೆಗೆ ಜ್ಞಾನ ರವಾನೆ ಮತ್ತು ಬದುಕಿನ ಭವಿಷ್ಯವನ್ನು ರೂಪಿಸುತ್ತದೆ ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಪುಟ್ಟ ಗ್ರಂಥಾಲಯ ಮತ್ತು ಪುಸ್ತಕ ಭಂಡಾರವನ್ನು ತಾವಿರುವ ಸ್ಥಳದಲ್ಲಿ ರೂಪಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಸಾರ್ಥಕ ಬದುಕನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಜಯರಾಮ್ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಪುಸ್ತಕಗಳನ್ನು ಹಾಗೂ ದಿನ ಪತ್ರಿಕೆಗಳನ್ನು ಓದುವುದರಿಂದ ಹೆಚ್ಚು ಜ್ಞಾನ ಸಂಪಾದನೆ ಪಡೆಯಬಹುದು ಎಂದರು.
ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಟಿ.ನಂಜುಂಡಪ್ಪ ಮಾತನಾಡಿ, ಶ್ರೇಷ್ಠ ಪುಸ್ತಕಗಳನ್ನು ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಹಕಾರಿಯಾಗಲಿದೆ ಎಂದರು.
ಈ ವೇಳೆ ಪ್ರಾಧ್ಯಾಪಕರಾದ ರಾಮಾಂಜಿನಮ್ಮ, ಡಾ.ಎ.ಬಿ.ಶೈಲಜಾಸಪ್ತಗಿರಿ, ಡಾ.ಗುಣರಂಜನಿ, ಡಾ.ರಾಮಾಂಜಿ, ವರ್ಷ, ಪ್ರೊ.ವಿಜಯ್ ಕುಮಾರ್, ಮದ್ದಿಲೇಟಿ, ಗ್ರಂಥಾಲಯದ ಸಿಬ್ಬಂದಿ ಶ್ರೀನಾಥರೆಡ್ಡಿ, ಗಂಗರಾಜು, ರಾಜು ಸೇರಿದಂತೆ ಇತರರು ಇದ್ದರು.