ಮತಗಟ್ಟೆಗೆ ಬಂದ ನವಿಲು: ಜಿಲ್ಲಾಧಿಕಾರಿ ಸೀರೆಯಲ್ಲಿ ಮತದಾನ ಜಾಗೃತಿ, ಮತದಾರರಿಗೆ ಹಾಡಿನ ಸ್ವಾಗತ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.26- ಚಾಮರಾಜನಗರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು ಮತಗಟ್ಟೆಗೆ ವಿಶೇಷ ಅತಿಥಿ ಬಂದ ಘಟನೆ ಚಾಮರಾಜನಗರ ತಾಲೂಕಿನ ಸಣ್ಣೇಗಾಲ ಗ್ರಾಮದಲ್ಲಿ ನಡೆಯಿತು.
ಮತದಾನ ಆರಂಭಗೊಳ್ಳುತ್ತಿದ್ದಂತೆ ಎಲ್ಲಿಂದಲೋ ಬಂದ ರಾಷ್ಟ್ರಪಕ್ಷಿ ನವಿಲು ಮತಗಟ್ಟೆಗೆ ಎಂಟ್ರಿ ಕೊಟ್ಟಿದೆ. ಬಳಿಕ, ಮತದಾರರನ್ನು ಕಂಡು ಸ್ವಲ್ಪ ಹೊತ್ತಿನ ಬಳಿಕ ಹಾರಿ ಹೋಗಿದೆ.
ಸೀರೆಯಲ್ಲಿ ಮತದಾನ ಜಾಗೃತಿ: ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲೆಯ ಉಪ ಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಅವರು ಧರಿಸಿರುವ ರೇಷ್ಮೆ ಸೀರೆಯಲ್ಲಿ ಮತದಾನ ಘೋಷಣೆ ನೇಯಲಾಗಿದೆ. ಕೈ ಮಗ್ಗದಿಂದ ನೇದಿರುವ ರೇಷ್ಮೆ ಸೀರೆಯಲ್ಲಿ ಚುನಾವಣಾ ಪರ್ವ- ದೇಶದ ಗರ್ವ ಎಂವ ಘೋಷವಾಕ್ಯವನ್ನು ಬರೆಯಲಾಗಿದೆ.
ಹಾಡಿನಿಂದ ಮತದಾರರಿಗೆ ಸ್ವಾಗತ: ಚಾಮರಾಜನಗರದ ರಾಮಸಮುದ್ರದಲ್ಲಿ ತೆರೆದಿರುವ ಸಾಂಸ್ಕೃತಿಕ ಮತಗಟ್ಟೆಯಲ್ಲಿ ಜಾನಪದ ಕಲಾವಿದರು ಮತದಾರರು ಸ್ವಾಗತಿಸಿ ಮತಗಟ್ಟೆಗೆ ಕರೆದೊಯ್ದರು. ತಂಬೂರಿ ಪದ, ಡಮರುಗ, ತಮಟೆ ವಾದ್ಯಗಳ ಮೂಲಕ ಮತದಾರರನ್ನು ಅದ್ಧೂರಿಯಾಗಿ ಸ್ವಾಗತಿಸಿ ಹಬ್ಬದಂತೆ ಸಂಭ್ರಮಿಸಲಾಯಿತು. ಇನ್ನು, ಮತಗಟ್ಟೆ ಮುಂಭಾಗ ಸೆಲ್ಫಿ ಪಾಯಿಂಟ್ ಕೂಡ ಮಾಡಲಾಗಿದೆ.