ಮತದಾನದಿಂದ ಮಾತ್ರ ಪ್ರಜಾಪ್ರಭುತ್ವ ರಕ್ಷಣೆ
ಕಲಬುರಗಿ,ಏ.26: ಆಮಿಷಕ್ಕೆ ಮತ ಮಾರಿಕೊಳ್ಳುವುದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಹಾಗಾಗಿ ಮತದಾರರು ಜಾಗೃತರಾಗುವ ಮೂಲಕ ಅರ್ಹ ಪ್ರಾಮಾಣಿಕ ಅಭ್ಯರ್ಥಿಗೆ ಮತ ನೀಡಬೇಕು ಎಂದು ಡಾ. ಶರಣು ಬಿ ಹೋನಗೆಜ್ಜಿ ಹೇಳಿದರು.
ಕಲಬುರ್ಗಿ ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಸರ್ವ ಜನಾಂಗದ ಜನರನ್ನು ಪ್ರೀತಿಸುವಂತಹ ಎಲ್ಲಾ ಜನಾಂಗವನ್ನು ಅಭಿವೃದ್ದಿ ಪಡಿಸುವಂತಹ ವ್ಯಕ್ತಿಯನ್ನು ಮತದಾನದ ಮೂಲಕ ಆಯ್ಕೆ ಮಾಡಬೇಕು, ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಬೇಕು. ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನದಿಂದ ಮಾತ್ರ ಸಾಧ್ಯವಾಗಿದೆ. ಪಾರದರ್ಶಕತೆ ಮತ್ತು ಮುಕ್ತತೆಯಿಂದ ಮತದಾನದಲ್ಲಿ ಭಾಗಿಯಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ.ಮತದಾನ ನಮ್ಮೆಲ್ಲರ ಹಕ್ಕು ಎಲ್ಲರೂ ಮತದಾನ ಮಾಡುವುದರ ಮೂಲಕ ದೇಶದ ಅಭಿವೃದ್ಧಿಗೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದೇಶದಲ್ಲಿ ಯುವಶಕ್ತಿಯ ಮತದಾರರೇ ಶೇ. 65ರಷ್ಟು ಇದ್ದು ಎಲ್ಲರೂ ಮತದಾನ ಮಾಡುವ ಮೂಲಕ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ನಂತರ ಹಿರಿಯರನ್ನು ಅವರ ಮಾರ್ಗದರ್ಶನದೊಂದಿಗೆ ಅವರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಿ ಅವರಿಗೂ ಮತದಾನ ಮಾಡುವುದರ ಮೂಲಕ ಮತದಾನದಲ್ಲಿ ಭಾಗಿಯಾಗಬೇಕು ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಹಂಶಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುಷ್ಮಾವತಿ ಎಸ್ ಹೋನಗೆಜ್ಜಿ, ಉಪನ್ಯಾಸಕ ಉಪನ್ಯಾಸಕಿಯರು ವಿದ್ಯಾರ್ಥಿಗಳು ಹಾಜರಿದ್ದರು.