ತಮ್ಮನ ಜೊತೆ ನಂಜನಗೂಡು ಶಾಸಕ ಮತದಾನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.26-ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು ಬೆಳಗ್ಗೆ 9 ರ ತನಕ ಶೇ.7 ರಷ್ಟು ಮತದಾನವಾಗಿತ್ತು.
ಪ್ರಜಾಪ್ರಭುತ್ವದ ದೊಡ್ಡಹಬ್ಬವಾದ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಕೂಡ ಉತ್ಸಾಹದಿಂದ ಮತದಾನ ನಡೆಸಿದ್ದಾರೆ. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಕೊಳ್ಳೇಗಾಲದ ಶಂಕರಪುರ ಬಡಾವಣೆಯಲ್ಲಿ ಮತದಾನ ಮಾಡಿದರೇ ಹನೂರು ಮಾಜಿ ಶಾಸಕ ಆರ್.ನರೇಂದ್ರ ದೊಡ್ಡಿಂದುವಾಡಿ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ.
ತಮ್ಮನ ಜೊತೆ ದರ್ಶನ್ ಮತದಾನ:
ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ತಮ್ಮ ಧೀರನ್ ಧ್ರುವನಾರಾಯಣ ಜೊತೆ ಮತದಾನ ಮಾಡಿದರು.
2013 ರಲ್ಲಿ ಮೊದಲ ಮತದಾನ ಮಾಡಿದ್ದ ದರ್ಶನ್ ಧ್ರುವನಾರಾಯಣ ಈಗ ಐದನೇ ಬಾರಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದ ಬಳಿಕ ಮಾಧ್ಯಮವರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸಿದ್ದು ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಬರಲಿದೆ, ಕಾಂಗ್ರೆಸ್ ಪರವಾದ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.