ಏಪ್ರಿಲ್ 27 ರ ವರೆಗೆ 2262 ಮತದಾರರು ಮನೆಯಲ್ಲೆ ಮತದಾನ

ಸಂಜೆವಾಣಿ ವಾರ್ತೆ
ದಾವಣಗೆರೆ; ಏ.26; ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ಮನೆಯಲ್ಲಿಯೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಮತದಾರರಿಂದ ಅತ್ಯುತ್ತಮ ಸ್ಪಂದನೆ ಸಿಗುತ್ತಿದೆ. ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ ಚುನಾವಣಾ ಆಯೋಗಕ್ಕೆ ಹಿರಿಯ ಮತದಾರರು ಧನ್ಯವಾದ ಸಲ್ಲಿಸಿದರು.ದಾವಣಗೆರೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡಲು ಏ.25 ರಿಂದ ಏ.27 ರ ವರೆಗೆ ಪ್ರಕ್ರಿಯೆ ನಡೆಯಲಿದೆ. ನೊಂದಾಯಿಸಿದ 2262 ಮತದಾರರ ಮನೆಬಾಗಿಲಿಗೆ ಚುನಾವಣಾ ಸಿಬ್ಬಂದಿಗಳು ತೆರಳಿ ಅಂಚೆ ಮತದಾನ ಮಾಡಿಸುವರು.ಪ್ರತಿ ಮತದಾರರ ಮನೆಗೆ ಪಿಆರ್‍ಓ, ಸೆಕ್ಟರ್ ಅಧಿಕಾರಿ, ಮೈಕ್ರೋ ಅಬ್ಸರ್‍ವರ್, ಮತದಾನ ಅಧಿಕಾರಿ, ಬಿಎಲ್‍ಓ, ವೀಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿಗಳ ತಂಡ ತೆರಳಿ ಚುನಾವಣಾ ಆಯೋಗದ ಪ್ರಕಟಣೆಯನ್ನು ಓದುವ ಮೂಲಕ ಮತದಾರರಿಗೆ ತಿಳಿಸಿ ಮನೆಯಲ್ಲಿಯೇ ಮತದಾನ ಮಾಡಲು ಮತದಾರರ ವಹಿಗೆ ಸಹಿ, ನಮೂನೆ-13 ಕ್ಕೆ ಸಹಿ ಪಡೆದು, ಬ್ಯಾಲೇಟ್‍ನಲ್ಲಿರುವಂತೆ ಅಭ್ಯರ್ಥಿಗಳ ವಿವರ, ತಿಳಿಸಿಕೊಟ್ಟು ಮತಚಲಾಯಿಸುವ ವಿಧಾನದ ಬಗ್ಗೆ ತಿಳಿಸಿದ ನಂತರ ಮತದಾನ ಪ್ರಕ್ರಿಯೆ ಮತಹಾಕುವಾಗ ಕಾಣದಂತೆ ಮರೆ ಮಾಡುವ ಮೂಲಕ ಮತಚಲಾವಣೆಗೆ ಅನುವು ಮಾಡಿಕೊಡಲಾಗುತ್ತದೆ.ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಇವರಿಂದ ಮನೆಯಲ್ಲಿಯೇ ಮತದಾನ ವೀಕ್ಷಣೆ; ದಾವಣಗೆರೆ ಉತ್ತರ ಕ್ಷೇತ್ರದ ಮತಗಟ್ಟೆ 71 ರಲ್ಲಿ ಬರುವ ಎನ್.ಸುಮತಿಭಟ್ ಸುಮಾರು 90 ವರ್ಷ ಇವರು ವಯೋವೃದ್ದರಾಗಿದ್ದು ಮನೆಯಲ್ಲಿಯೇ ಮತದಾನ ಮಾಡಿದರು. ಮತ್ತು ಮತಗಟ್ಟೆ 75 ರಲ್ಲಿನ ವಿನೋದಬಾಯಿ.ಹೆಚ್, ವಿಶೇಷಚೇತನರು ಇವರು ಮನೆಯಲ್ಲಿಯೇ ಮತದಾನ ಮಾಡಿದರು. ಮನೆಯಲ್ಲಿ ಮತದಾನ ಮಾಡುವಾಗ ಮತದ ಗೌಪ್ಯತೆ ಮತ್ತು ಮಹತ್ವತೆಯನ್ನು ಕಾಪಾಡಿಕೊಳ್ಳಬೇಕು, ಈ ಬಗ್ಗೆ ವೀಕ್ಷಣೆ ಮಾಡಿದರು.