ಎಲ್ಲೆಡೆ ಸದ್ದು ಮಾಡುತ್ತಿದೆ ಸಿಲಿಂಡರ್: ಜಿ. ಬಿ. ವಿನಯ್ ಕುಮಾರ್ ಗೆ ಭಾರೀ ಬೆಂಬಲ

ಸಂಜೆವಾಣಿ ವಾರ್ತೆ
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರ ಗ್ಯಾಸ್ ಸಿಲಿಂಡರ್ ಚಿಹ್ನೆ ಹಳ್ಳಿ ಹಳ್ಳಿಗಳಲ್ಲೂ ಭಾರೀ ಸದ್ದು ಮಾಡುತ್ತಿದೆ. ವಿನಯ್ ಕುಮಾರ್ ಅವರಿಗೆ ಸಿಲಿಂಡರ್ ಗುರುತು ಸಿಕ್ಕಿದ್ದು, ವಿನಯ್ ಕುಮಾರ್ ಅವರು ಯಾವ ಗ್ರಾಮಕ್ಕೆ ಹೋದರೂ ಸಿಲಿಂಡರ್ ಹೊತ್ತುಕೊಂಡು ಬರುತ್ತಿರುವ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಈ ಬಾರಿ ಸಿಲಿಂಡರ್ ಗೆ ನಮ್ಮಮತ ಎಂಬ ಘೋಷಣೆ ಹಾಕುತ್ತಿದ್ದಾರೆ.ಕೇಂದ್ರ ಚುನಾವಣಾ ಆಯೋಗವು ಜಿ. ಬಿ. ವಿನಯ್ ಕುಮಾರ್ ಅವರಿಗೆ ಸಿಲಿಂಡರ್ ಚಿಹ್ನೆ ನೀಡಿದೆ. ವಿನಯ್ ಕುಮಾರ್ ಅವರೂ ಸಹ ಸಿಲಿಂಡರ್ ಚಿಹ್ನೆಗೆ ಮತ ನೀಡಿ, ಸ್ವಾಭಿಮಾನಿ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ.ಜಗಳೂರು, ಹರಪನಹಳ್ಳಿ, ದಾವಣಗೆರೆ ವಿಧಾನಸಭಾ ಕ್ಷೇತ್ರದ ಉತ್ತರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಚನ್ನಗಿರಿ, ಹರಿಹರ, ಹೊನ್ನಾಳಿ, ಮಾಯಕೊಂಡ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಬಲಿಗರು, ಅಭಿಮಾನಿಗಳು ಸಿಲಿಂಡರ್ ಚಿಹ್ನೆ ಹಿಡಿದು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.ಜನರಲ್ಲಿಯೂ ಜಾಗೃತಿ ಮೂಡಿಸಲು ತಂಡಗಳನ್ನು ನಿಯೋಜಿಸಲಾಗಿದ್ದು, ಮನೆಗೆ ಬೇಕು ಸಿಲಿಂಡರ್, ನಿಮ್ಮ ಮತ ಹಾಕಿ ವಿನಯ್ ಕುಮಾರ್ ಗೆ ಎಂಬ ಧ್ಯೇಯವಾಕ್ಯದಡಿ ಪ್ರಚಾರ ನಡೆಸುತ್ತಿರುವ ಅಭಿಮಾನಿಗಳು, ಹಿತೈಷಿಗಳು ಕುಟುಂಬ ರಾಜಕಾರಣದ ಬಗ್ಗೆಯೂ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದಾರೆ.ಯಾವ ಹಳ್ಳಿಗಳಿಗೆ ಹೋದರೂ ವಿನಯ್ ಕುಮಾರ್ ಅವರ ಸಿಲಿಂಡರ್ ಸದ್ದು ಬಿಸಿಲಿನ ಬೇಗೆ ಹೆಚ್ಚಾದಂತೆ ಜಾಸ್ತಿಯಾಗುತ್ತಿದೆ. ಸಿಲಿಂಡರ್ ಕಾವು ಏರುತ್ತಿದ್ದು, ಜನರು ಈ ಬಾರಿ ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ಕ್ರಮ ಸಂಖ್ಯೆ 28 ಆಗಿದ್ದು, ಸಿಲಿಂಡರ್ ಗುರುತಿಗೆ ಅಮೂಲ್ಯವಾದ ಮತ ನೀಡಿ ಬಡತನ ಹಿನ್ನೆಲೆಯಿಂದ ಬಂದ ಯುವಕನನ್ನು ಲೋಕಸಭೆಗೆ ಕಳುಹಿಸಿ ಎಂದು ವಿನಯ್ ಕುಮಾರ್ ಮನವಿ ಮಾಡಿದ್ದಾರೆ.ದಾವಣಗೆರೆ ಜಿಲ್ಲೆಯ ಅಭಿವೃದ್ಧಿ, ಯೋಜನೆಗಳ ಕುರಿತಂತೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಭರವಸೆ ನೀಡುತ್ತಲೇ ಇದ್ದಾರೆ. ಯಾವ ತಾಲೂಕಿಗೆ ಹೋದರೂ ಆ ತಾಲೂಕಿಗೆ ಸಂಬಂಧಿಸಿದಂತೆ ಯೋಜನೆಗಳ ಕುರಿತಂತೆ ಮಾತನಾಡುತ್ತಾರೆ, ಭರವಸೆ ನೀಡುತ್ತಾರೆ. ಆದ್ರೆ, ಇಷ್ಟು ವರ್ಷ ಯಾಕೆ ಮಾಡಲು ಆಗಲಿಲ್ಲ. ಬಿಜೆಪಿ ಸಂಸದರು 20 ವರ್ಷಗಳಿಂದ ಇದ್ದರೆ, ಕಾಂಗ್ರೆಸ್ ನವರೂ ಅಧಿಕಾರದಲ್ಲಿದ್ದವರು. ಆಗಲೇ ಮುತುವರ್ಜಿ ವಹಿಸಿ ಯೋಜನೆಗಳು, ಕೈಗಾರಿಕೆಗಳು, ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಬಡವರು ಸೇರಿದಂತೆ ಎಲ್ಲಾ ವರ್ಗದವರಿಗೂ ಅನುಕೂಲ ಮಾಡಿಕೊಡಬಹುದಿತ್ತು. ಯಾಕೆ ಮಾಡಿಲ್ಲ ಎಂಬುದನ್ನು ಹೇಳುತ್ತಿಲ್ಲ. ಜನರು ಮೊದಲು ಈ ಪ್ರಶ್ನೆ ಕೇಳುವಂತಾಗಬೇಕು ಎಂದು ಹೇಳಿದರು.ಕೈಗಾರಿಕೆಗಳು ಹೆಚ್ಚು ಬಂದರೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಗ್ರಾಮಾಂತರ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ದೊರೆತರೆ ಮಕ್ಕಳು ಉತ್ತಮ ಪ್ರಜೆಗಳಾಗಿ ಉನ್ನತ ಅಧಿಕಾರಿಗಳಾಗುತ್ತಾರೆ. ಒಳ್ಳೆಯ ಶಿಕ್ಷಕರು, ಶಾಲೆಗಳಿದ್ದರೂ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಕಲಿಕೆಯ ಉತ್ಸಾಹ ಮಕ್ಕಳಲ್ಲಿ ಇದ್ದರೂ ಸೂಕ್ತವಾದ ವ್ಯವಸ್ಥೆ, ಅವಕಾಶ ಸಿಗದೇ ವಂಚಿತರಾಗುತ್ತಿದ್ದಾರೆ. ಜಾತಿ, ಧರ್ಮ ನೋಡದೇ ಎಲ್ಲಾ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಾನು ಸಿದ್ಧನಿದ್ದು, ನಿಮ್ಮ ಸೇವೆಗೆ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.