ಕಾಯಿಲೆಗಳ ನಿರ್ಲಕ್ಷ್ಯ ಬೇಡ ಜಾಗ್ರತೆ ಇರಲಿ :  ಡಾ.ನಟರಾಜ್

ಸಂಜೆವಾಣಿ ವಾರ್ತೆ
ಶಿವಮೊಗ್ಗ ಏ.೨೬; ಕಾಯಿಲೆಗಳ ಪ್ರಮಾಣ ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ಬೇಡ ಜಾಗೃತರಾಗಿ ಇರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ನಟರಾಜ್   ಅವರು ತಿಳಿಸಿದರು.ಅವರು  ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜಿನಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗಾವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ವತಿಯಿಂದ ಆಯೋಜಿಸಿದ ವಿಶ್ವ ಮಲೇರಿಯಾ ದಿನಚರಣೆ ಉದ್ಘಾಟಿಸಿ  ಮಾತನಾಡಿದರು.ಕಾಯಿಲೆಗಳನ್ನು ಇಂದಿನ ಜನಾಂಗ ಸಾಕಷ್ಟು ನಿರ್ಲಕ್ಷಿಸುತ್ತಿದ್ದಾರೆ ಮೊಬೈಲ್ ಮೂಲಕ ಪ್ರತಿಯೊಂದನ್ನು ಕ್ಷಣದಲ್ಲಿ ತಿಳಿದುಕೊಳ್ಳುವ ಸೌಲಭ್ಯ ಇರುವುದರಿಂದ ಕಾಯಿಲೆಗಳ ಬಗ್ಗೆ ಭಯವಿಲ್ಲದಂತಾಗಿದೆ. ಮಲೇರಿಯಾ ಕಾಯಿಲೆ ಈಗ ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ಮಾಡಬಾರದು ಈ ಕಾರ್ಯಕ್ರಮಗಳ ಮೂಲಕ ಮಾಹಿತಿ ಪಡೆದು ವಿದ್ಯಾರ್ಥಿಗಳು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಜನರಿಗೆ ಈ ಕಾಯಿಲೆ ಕುರಿತು ಅರಿವು ಮೂಡಿಸಿ ಕಾಯಿಲೆಯನ್ನು ತಡೆಗಟ್ಟಲು ಮುಂದಾಗಬೇಕಾಗಿದೆ ಎಂದರು.ಜಿಲ್ಲಾ ರೋಗಾವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ ಮಲೇರಿಯಾ ಕಾಯಿಲೆ ಪುರಾತನ ಕಾಲದಿಂದಲೂ ಎಡೆಬಿಡದೇ ಕಾಡಿಸುತ್ತಿದೆ ಇಂದಿಗೂ ಪ್ರತಿ ವರ್ಷ ಮಲೇರಿಯಾದಿಂದ 20 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಕಾಯಿಲೆ ಬರುತ್ತದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಸುಳಿಯದಂತೆ ಎಚ್ಚರ ವಹಿಸಬೇಕು 2005 ರಾಷ್ಟ್ರೀಯ ಕೀಟಜನ್ಯ ನಿಯಂತ್ರಣ ಕಾರ್ಯಕ್ರಮದ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು.