ಜನಪರ ಪರ್ಯಾಯ ರಾಜಕೀಯಕ್ಕಾಗಿ ಜಾಗೃತ ಮತದಾರರ ಕಾರ್ಯಾಗಾರ
ಕೆಂಭಾವಿ: ಏ.25:ಸದಾ ಜನರ ಜೊತೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಚುನಾವಣೆಯಲ್ಲಿ ಮಾತ್ರ ಮುಖತೋರಿಸುವ ಅಭ್ಯರ್ಥಿಯನ್ನು ಕಡೆಗಣಿಸಬೇಕು ಎಂದು ಎಸ್‍ಯುಸಿಐ (ಸಿ) ರಾಜ್ಯ ಸಮಿತಿ ಸದಸ್ಯ ಕೆ. ಸೋಮಶೇಖರ್ ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ ಹಾಗೂ ಅಖಿಲ ಭಾರತ ಕೃಷಿ-ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಜನಪರ ಪರ್ಯಾಯ ರಾಜಕೀಯಕ್ಕಾಗಿ ಜಾಗೃತ ಮತದಾರರ ಕಾರ್ಯಾಗಾರದಲ್ಲಿ ಮಾತನಾಡಿ, ಇಲ್ಲಿಯವರೆಗೂ ನಮ್ಮನ್ನಾಳಿದ ಸರ್ಕಾರಗಳು ಯುವ ಜನರನ್ನು ಕೇವಲ ವೋಟಿಗಾಗಿ ಬಳಸಿಕೊಂಡಿದ್ದಾರೆ ಹೊರೆತು ನಿರುದ್ಯೋಗ ಸಮಸ್ಯೆ ಪರಿಹರಿಸಲು ಯಾವುದೇ ರೀತಿಯ ಯೋಜನೆ ರೂಪಿಸಿಲ್ಲ ಎಂದು ಆರೋಪಿಸಿದರು.
ಹಲವಾರು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ 10 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರಕಾರವು ರೈತ ವಿರೋಧಿ, ದುರಾಡಳಿತ ನಡೆಸಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಹಾಗಾಗಿ ಜನಪರ, ರೈತಪರ ಮತ್ತು ಕಾರ್ಮಿಕರ ಪರವಾಗಿ ಹೋರಾಡುತ್ತಿರುವ ಎಸ್‍ಯುಸಿಐ (ಸಿ) ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ ಅವರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಎಐಡಿವಾಯ್‍ಒ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಬೆಲೆ ಏರಿಕೆ, ನಿರುದ್ಯೋಗ, ಬಡತನ ಮತ್ತು ರೈತರ ಆತ್ಮಹತ್ಯೆ ಸೇರಿ ಮುಂತಾದ ಸಮಸ್ಯೆಗಳಿಗೆ ಈಗಿರುವ ರಾಜಕೀಯ ವ್ಯವಸ್ಥೆಯೇ ಕಾರಣವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಪರ ಕಾಳಜಿಯುಳ್ಳ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ದಿನೇ ದಿನೇ ರೈತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ರೈತ ವಿರೋಧಿ ಕಾಯ್ದೆಗಳನ್ನು ಹೇರಲಾಗುತ್ತಿದೆ. ಯಾವ ಪಕ್ಷಗಳು ಕೂಡಾ ರೈತರ ಪರವಾಗಿಲ್ಲ. ಇಂತಹ ರೈತ ವಿರೋಧಿ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮುಖಂಡರಾದ ಶಿವರಾಜ್ ಹೆಳವರ್, ಗುರಪ್ಪಗೌಡ ಹೊಸಗೌಡ್ರ, ಗುರನಾಥರೆಡ್ಡಿ ವಣಿಕ್ಯಾಳ, ದೇವಿಂದ್ರ ಬಿಂಜಲಬಾವಿ, ಚಾಂದಪಾಶಾ ಭಾಗವಾನ್, ಸಿದ್ದಣ್ಣ ಗೂಗಲ್, ಮಲ್ಲು ಕಿರದಳ್ಳಿ, ಬಸಣ್ಣ ದೇಶಪಾಂಡೆ, ಬಲವಂತರಾಯ ಯಡಿಯಾಪುರ, ಮಲ್ಲು ಬನ್ನಿ, ಶಂಕರ ದೇಸಾಯಿ, ರಮೇಶ ನೂಲಿ ಸೇರಿದಂತೆ ಇತರರಿದ್ದರು.